ಏಕಾಏಕಿ ಮುಚ್ಚಿದ ಶ್ರೀ ಬಸವೇಶ್ವರ ಅಂಗ್ಲ ಮಾಧ್ಯಮ ಶಾಲೆ: ಆರ್‌ಟಿಇ ಅಡಿಯಲ್ಲಿ ದಾಖಲಾದ 56 ಮಕ್ಕಳು ಅತಂತ್ರ

ತುಮಕೂರು, ಜು.01:ಸಿದ್ಧಗಂಗಾ ಮಠದ ಸಿದ್ಧಗಂಗಾ ವಿದ್ಯಾಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಪ್ರಸಕ್ತ ವರ್ಷದಿಂದಲೇ ಮುಚ್ಚುತ್ತಿದ್ದು, ಶಾಲೆಯ ಏಕಾಏಕಿ ನಿರ್ಧಾರದಿಂದ 300ಕ್ಕೂ ಮಕ್ಕಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ.
ನಗರದ ಕೇಂದ್ರ ಭಾಗದಲ್ಲಿರುವ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಗೆ ಮೈಸೂರು ಮಹಾರಾಜರು ಆಟದ ಮೈದಾನವನ್ನು ಉಡುಗೊರೆಯಾಗಿ ನೀಡಿದ್ದರು. ಸಿದ್ಧಗಂಗಾ ಮಠದ ಹಿಂದಿನ ಅಧ್ಯಕ್ಷರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ ದೂರದೃಷ್ಠಿಯಿಂದ ಪ್ರಾರಂಭವಾದ ಈ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಇವರಲ್ಲಿ 56ಕ್ಕೂ ಹೆಚ್ಚು ಆರ್‌ಟಿಇ ವಿದ್ಯಾರ್ಥಿಗಳು ಹಾಗೂ ಉಳಿದ ಮಕ್ಕಳು ಖಾಸಗಿಯಾಗಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದರು.
ಮೈಸೂರು ಮಹಾರಾಜರ ನೆರವಿನೊಂದಿಗೆ ಪ್ರಾರಂಭವಾದ ಈ ಶಾಲೆಯನ್ನು ಏಕಾಏಕಿ ಮುಚ್ಚಲು ನಿರ್ಧರಿಸಿರುವುದಾಗಿ 12-06-2021 ರಂದು ಪೋಷಕರಿಗೆ ಶಾಲೆಯ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, 300ಕ್ಕೂ ಹೆಚ್ಚು ಮಕ್ಕಳನ್ನು ಬೇರೆ ಶಾಲೆಗೆ ದಾಖಲಾತಿ ಮಾಡಿಕೊಳ್ಳಲು ವರ್ಗಾವಣೆ ಪತ್ರವನ್ನು ಪಡೆದುಕೊಳ್ಳುವಂತೆ ಸೂಚನೆ ನೀಡಿದೆ.
ಬಡವರು, ಮದ್ಯಮ ವರ್ಗದವರ ಮಕ್ಕಳಿಗೆ ಕೈಗೆಟುಕುವ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಒಂದರಿಂದ 10ನೇ ತರಗತಿವರೆಗಿನ ಶಾಲೆಯನ್ನು ಮುಚ್ಚಲು ಮುಂದಾಗಿರುವುದಕ್ಕೆ ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.
ನಿಯಮ ಉಲ್ಲಂಘನೆ ಆರೋಪ: ಯಾವುದೇ ಶಾಲೆಯ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚಬೇಕಾದರೆ ಈ ಹಿಂದಿನ ಶೈಕ್ಷಣಿಕ ವರ್ಷದ ಕೊನೆಯ ದಿನ ಓದುತ್ತಿರುವ ಮಕ್ಕಳ ಪೋಷಕರು ಹಾಗೂ ಶಿಕ್ಷಣ ಇಲಾಖೆಗೆ ಲಖಿತ ಮಾಹಿತಿ ನೀಡಬೇಕು. ಆದರೆ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ ಮುಚ್ಚುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದು ಕಳೆದ 20 ದಿನಗಳ ಹಿಂದೆಯಷ್ಟೇ. ಕೇಂದ್ರ ಸರಕಾರದ ಶಿಕ್ಷಣ ಹಕ್ಕು ಕಾಯ್ದೆಯಡಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ದಾಖಲಾಗಿರುವ 56 ಮಕ್ಕಳು ಶಾಲೆಯ ನಿರ್ಧಾರದಿಂದ ಬೇರೆ ಶಾಲೆಗೆ ದಾಖಲಾಗಬೇಕಿದ್ದು, ಬೇರೆ ಶಾಲೆಗೆ ದಾಖಲಾದರೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಪಡೆದಿರುವ ಶುಲ್ಕ ರಹಿತ ಶಿಕ್ಷಣದ ಹಕ್ಕು ಮೊಟಕುಗೊಳ್ಳಲಿದೆ.
ಲಾಕ್‍ಡೌನ್‍ನಿಂದಾಗಿ ಕಳೆದ ವರ್ಷವೂ ಸಹ ತರಗತಿಗಳು ಮುಂದುವರೆದಿಲ್ಲ. ಈಗ ಏಕಾಏಕಿಯಾಗಿ ಶಾಲೆಯನ್ನು ಮುಚ್ಚುವುದಾಗಿ ಕಳೆದ ಮೇ ತಿಂಗಳಲ್ಲಿ ಮಾಹಿತಿ ನೀಡಿದ್ದು, ಬೇರೆ ಶಾಲೆಗಳಲ್ಲಿಯೂ ದಾಖಲಾತಿ ದೊರಕದಂತಾಗಿದ್ದು, ಹೆಚ್ಚುವರಿ ಶುಲ್ಕವನ್ನು ಭರಿಸಬೇಕಾದ ಹೊರೆ ಬಡ ಮತ್ತು ಮಧ್ಯಮ ವರ್ಗದ ಪೋಷಕರ ಮೇಲೆ ಬಿದ್ದಿದೆ. ಡಿಡಿಪಿಐ ಮತ್ತು ಬಿಇಓ ಅವರು ಪೋಷಕರಿಗೆ 'ನೀವು ಹೇಳಿದ ಶಾಲೆಗೆ ಪ್ರವೇಶ ಕೊಡಿಸಲು ಸಿದ್ಧ. ಆದರೆ ಶುಲ್ಕು ಭರಿಸುವುದು ನಿಮ್ಮ ಜವಾಬ್ದಾರಿ' ಎಂದು ಸಂಪೂರ್ಣ ಹೊಣೆಯನ್ನು ಪೋಷಕರಿಗೆ ಬಿಟ್ಟಿದ್ದಾರೆ. ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತುಮಕೂರು ಬಿಇಓ ಹನುಮಾನಾಯಕ್, ವಿದ್ಯಾರ್ಥಿಗಳ ಕೊರತೆಯಿಂದ ಶಾಲೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರಿಗೆ ವೇತನ ನೀಡುವಷ್ಟು ಆದಾಯ ಬರುತ್ತಿಲ್ಲ. ಹಾಗಾಗಿ ಶಾಲೆಯನ್ನು ಮುಚ್ಚುತ್ತಿರುವುದಾಗಿ ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯಿಂದ 20 ದಿನಗಳ ಹಿಂದೆ ನಮಗೆ ಪತ್ರ ಬಂದಿತ್ತು. ತಕ್ಷಣವೇ ಅಲ್ಲಿ ಕಲಿಯುತ್ತಿದ್ದ ಆರ್‌ಟಿಇ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಡಿಡಿಪಿಐ ಅವರಿಗೆ ಪತ್ರ ಬರೆದಿದ್ದೇನೆ. ಅವರು ಸಹ ತಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಪೋಷಕರು ಕೇಳಿದ ಶಾಲೆಯಲ್ಲಿ ಪ್ರವೇಶ ಕೊಡಿಸಲು ಇಲಾಖೆ ಸಿದ್ಧವಿದೆ. ಶುಲ್ಕವನ್ನು ಪೋಷಕರೇ ಭರಿಸಬೇಕು ಎಂದರು.







