ಅತಿ ಪ್ರಬಲ ಕೊರೋನ ವೈರಸ್ ಪ್ರಭೇದವಾಗುವತ್ತ ಡೆಲ್ಟಾ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ವಿಶ್ವಸಂಸ್ಥೆ, ಜು. 1: ಕೋವಿಡ್-19 ಸಾಂಕ್ರಾಮಿಕದ ಡೆಲ್ಟಾ ಪ್ರಭೇದವು ಈಗ ಸುಮಾರು 100 ದೇಶಗಳಲ್ಲಿ ಅಸ್ತಿತ್ವದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಮುಂಬರುವ ತಿಂಗಳುಗಳಲ್ಲಿ ಈ ಅತಿ ಸಾಂಕ್ರಾಮಿಕ ಪ್ರಭೇದವು ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ನ ಬಲಿಷ್ಠ ಪ್ರಭೇದವಾಗಿ ಹೊರಹೊಮ್ಮಲಿದೆ ಎಂದು ಅವರು ಎಚ್ಚರಿಸಿದರು.
2021 ಜೂನ್ 29ರವರೆಗೆ, 96 ದೇಶಗಳು ಕೊರೋನ ವೈರಸ್ನ ಡೆಲ್ಟಾ ಪ್ರಭೇದ ಪ್ರಕರಣಗಳನ್ನು ವರದಿ ಮಾಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಕೋವಿಡ್-19 ವಾರದ ಸಾಂಕ್ರಾಮಿಕ ವರದಿಯಲ್ಲಿ ತಿಳಿಸಿದೆ. ಆದರೆ, ಪ್ರಭೇದಗಳನ್ನು ಗುರುತಿಸಲು ಅಗತ್ಯವಾದ ವೈಜ್ಞಾನಿಕ ಮೂಲಸೌಕರ್ಯಗಳ ಲಭ್ಯತೆ ವಿರಳವಾಗಿರುವುದರಿಂದ ಈ ಅಂಕಿಅಂಶಗಳು ಕನಿಷ್ಠವಾಗಿರುವ ಸಾಧ್ಯತೆಯಿದೆ ಎಂದೂ ಅದು ಹೇಳಿದೆ. ಈ ಪ್ರಭೇದದ ವೈರಸ್ ಹರಡುವ ವೇಗವು ಅಧಿಕವಾಗಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಇದು ಇತರ ಪ್ರಭೇದಗಳನ್ನು ಹಿಂದಿಕ್ಕಿ ಜಾಗತಿಕವಾಗಿ ಪ್ರಬಲ ಪ್ರಭೇದವಾಗುವ ನಿರೀಕ್ಷೆಯಿದೆ ಎಂದಿದೆ.
ಕೊರೋನ ವೈರಸನ್ನು ವೈಯಕ್ತಿಕ, ಸಮುದಾಯ ಮಟ್ಟದಲ್ಲಿ ಎದುರಿಸಲು ಬಳಸಲಾಗುವ ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಉಪಕ್ರಮಗಳು, ಡೆಲ್ಟಾ ಸೇರಿದಂತೆ ಇತರ ಕಳವಳಕಾರಿ ಪ್ರಭೇದಗಳಿಗೂ ಅನ್ವಯಿಸುತ್ತವೆ ಎಂದು ಸಂಸ್ಥೆ ಹೇಳಿದೆ.





