ಕೆನಡ: ಉಷ್ಣಮಾರುತಕ್ಕೆ ಕನಿಷ್ಠ 500 ಮಂದಿ ಬಲಿ
ಅಮೆರಿಕದ ವಾಶಿಂಗ್ಟನ್, ಒರೆಗಾನ್ ನಲ್ಲಿಯೂ ತೀವ್ರ ತಾಪಮಾನ
ಸ್ಯಾಲೇಮ್, ಜು.1: ಶತಮಾನದಲ್ಲೇ ಕಂಡಿರದಂತಹ ಭೀಕರವಾದ ಉಷ್ಣ ಮಾರುತದಿಂದಾಗಿ ಕೆನಡದಲ್ಲಿ ಕನಿಷ್ಠ 500 ಮಂದಿ ಮೃತಪಟ್ಟಿದ್ದಾರೆ. ಕೆನಡದ ಬ್ರಿಟಿಶ್ ಕೊಲಂಬಿಯಾ ರಾಜ್ಯದಲ್ಲಿ ಗರಿಷ್ಠ ಸಾವುಗಳು ಸಂಭವಿಸಿದ್ದು, ಮೃತರ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆಯೆಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಅಮೆರಿಕದ ವಾಶಿಂಗ್ಟನ್ ಮತ್ತು ಒರೆಗಾನ್ ರಾಜ್ಯಗಳಲ್ಲಿಯೂ ಉಷ್ಣಮಾರುತ ತೀವ್ರವಾಗಿರುವುದಾಗಿ ವರದಿಗಳು ತಿಳಿಸಿವೆ.
ಬ್ರಿಟಿಶ್ ಕೊಲಂಬಿಯಾದ ಲಿಟ್ಟೊನ್ನಲ್ಲಿ ಬುಧವಾರ ತಾಪಮಾನವು ದಾಖಲೆಯ 121 ಡಿಗ್ರಿ ಫ್ಯಾರನ್ಹೀಟ್(49.5 ಡಿಗ್ರಿ ಸೆಲ್ಸಿಯಸ್)ಗೆ ತಲುಪಿದೆ. ಸಾಮಾನ್ಯವಾಗಿ ವರ್ಷದಲ್ಲಿ ಈ ಅವಧಿಯಲ್ಲಿ ತಂಪಾದ ಹಾಗೂ ಚಳಿಯಿಂದ ಕೂಡಿದ ಹವಾಮಾನವಿರುವ ಬ್ರಿಟಿಶ್ ಕೊಲಂಬಿಯಾದಲ್ಲಿ ಈ ವರ್ಷ ತಾಪಮಾನದ ಏರಿಕೆಯಾಗಿರುವ ಪ್ರಾಕೃತಿಕ ವೈಪರೀತ್ಯವು ನಿವಾಸಿಗಳನ್ನು ಅಚ್ಚರಿಗೊಳಿಸಿದೆ.
ಬ್ರಿಟಿಶ್ ಕೊಲಂಬಿಯಾದ ಅತಿ ದೊಡ್ಡ ನಗರವಾದ ವ್ಯಾಂಕೂವರ್ನಲ್ಲಿ ಹವಾನಿಯಂತ್ರಕ (ಏರ್ಕಂಡೀಶನರ್)ಗಳಿಲ್ಲದ ಮನೆಗಳ ನಿವಾಸಿಗಳು ನಗರಗಳಲ್ಲಿರುವ ಹೊಟೇಲ್ಗಳಿಗೆ ದೌಡಾಯಿಸುತ್ತಿದ್ದಾರೆ. ಹೀಗಾಗಿ ವ್ಯಾಂಕೂವರ್ ಪ್ರದೇಶದ ವಿವಿಧ ಹೊಟೇಲ್ಗಳಲ್ಲಿ ಆಶ್ರಯಪಡೆದಿದ್ದಾರೆ. ಈ ಮಧ್ಯೆ ಏರ್ಕಂಡೀಶನರ್ಗಳ ಮಾರಾಟವೂ ಉತ್ತುಂಗಕ್ಕೆ ತಲುಪಿದೆ. ಸಾಮಾನ್ಯವಾಗಿ ಕೆಲವೇ ನೂರು ಡಾಲರ್ಗಳಿಗೆ ಲಭ್ಯವಿದ್ದ ಹವಾನಿಯಂತ್ರಕಗಳ ಬೆಲೆ 2 ಸಾವಿರ ಕೆನಡಿಯನ್ ಡಾಲರ್ ವರೆಗೆ ತಲುಪಿದೆ. ಕೆನಡದ ವಿವಿಧೆಡೆ ತಾಪಮಾನವು 25 ಡಿಗ್ರಿ ಸೆಲ್ಸಿಯಸ್ಗಳಾಗಿದ್ದು, ಇದು ವರ್ಷದ ಈ ಅವಧಿಯ ಸರಾಸರಿ ತಾಪಮಾನಕ್ಕಿಂತ ತುಂಬಾ ಅಧಿಕವಾಗಿದೆ.