ವಿನಾಶದ ಅಂಚಿನಲ್ಲಿ ಟೈಟಾನಿಕ್ ಅವಶೇಷ
ಲಂಡನ್, ಜು.21: ಹಿಮದ ನಡುಗಡ್ಡೆಗೆ ಡಿಕ್ಕಿ ಹೊಡೆದು ಸಮುದ್ರದಲ್ಲಿ ಮುಳುಗಿದ ವಿಶ್ವಪ್ರಸಿದ್ಧ ಹಡಗು ಟೈಟಾನಿಕ್ ಹಡಗಿನ ಅವಶೇಷಗಳು ಲೋಹ ತಿನ್ನುವ ಬ್ಯಾಕ್ಟೀರಿಯಾಗಳ ದಾಳಿಯಿಂದಾಗಿ ನಿಧಾನವಾಗಿ ನಶಿಸುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಲೋಹ ತಿನ್ನುವ ಬ್ಯಾಕ್ಟೀರಿಯಾಗಳಿಂದಾಗಿ ಹಡಗಿನ ಅವಶೇಷಗಳಲ್ಲಿ ರಂಧ್ರಗಳಾಗಿವೆ. ಈಗಾಗಲೇ ಹಡಗಿನಲ್ಲಿದ್ದ ವೀಕ್ಷಣಾ ಗೋಪುರ (ಕ್ರೋವ್ಸ್ ನೆಸ್ಟ್) ನಾಶವಾಗಿ ಹೋಗಿದೆ ಹಾಗೂ ಹಡಗಿನ ಪ್ರಸಿದ್ಧವಾದ ಬಿಲ್ಲಿನಾಕೃತಿಯ ರೇಲಿಂಗ್ (ಕಂಬಿಬೇಲಿ) ಯಾವುದೇ ಸಂದರ್ಭದಲ್ಲಿಯೂ ಪತನಗೊಳ್ಳುವ ಸಾಧ್ಯತೆಯಿದೆ ಎಂದರು.
ಸಾಗರಶೋಧನಾ ಸಂಸ್ಥೆ ‘ಓಶಿಯನ್ಗೇಟ್ ಎಕ್ಸ್ಪೆಡಿಶನ್ಸ್’ ವಾರ್ಷಿಕವಾಗಿ ನಡೆಸುವ ಸಾಗಾರಾದಳದಲ್ಲಿ ಹುದುಗಿರುವ ಟೈಟಾನಿಕ್ ಹಡಗಿನ ಅವಶೇಗಳ ವೀಕ್ಷಣಾ ಪ್ರವಾಸ ಈ ವಾರ ಆರಂಭಗೊಳ್ಳಲಿದ್ದು, ಈ ಸಂದರ್ಭದಲ್ಲಿ ಹಡಗಿನ ಶಿಥಿಲತೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರೆಯುವ ನಿರೀಕ್ಷೆಯಿದೆ.
ಟೈಟಾನಿಕ್ ಕಣ್ಮರೆಯಾಗುವ ಅಥವಾ ಗುರುತಿಸಲಾಗದಂತಹ ಸ್ಥಿತಿಯನ್ನು ತಲುಪುವ ಮೊದಲು ನಾವು ಅದನ್ನು ದಾಖಲೀಕರಿಸಬೇಕಾಗಿದೆ ಎಂದು ಓಶಿಯನ್ ಗೇಟ್ ಎಕ್ಸ್ಪೆಡಿಶನ್ಸ್ನ ಅಧ್ಯಕ್ಷ ಸ್ಟಾಕ್ಟನ್ ರಶ್ ತಿಳಿಸಿದ್ದಾರೆ.
ಆಳಸಮುದ್ರದ ಪ್ರವಾಹ ಹಾಗೂ ಪ್ರತಿದಿನವೂ ನೂರಾರು ಪೌಂಡ್ಗಳಷ್ಟು ಕಬ್ಬಿಣವನ್ನು ತಿನ್ನುತ್ತಿರುವ ಬ್ಯಾಕ್ಟೀರಿಯಾಗಳಿಂದಾಗಿ 109 ವರ್ಷಗಳಷ್ಟು ಹಳೆಯಾದಾದ ಟೈಟಾನಿಕ್ ಹಡಗಿನ ಅವಶೇಷಗಳು ಜೀರ್ಣಾವಸ್ಥೆಯನ್ನು ತಲುಪಿದೆ ಎಂದು ತಜ್ಞರು ತಿಳಿಸಿದ್ದಾರೆ. ಹಡಗಿನ ಸವಕಳಿ ಹೀಗೆಯೇ ಮುಂದುವರಿದಲ್ಲಿ ಕೆಲವೇ ದಶಕಗಳಲ್ಲಿ ಅದು ಕಣ್ಮರೆಯಾಗಲಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ. 1985ರಲ್ಲಿ ಟೈಟಾನಿಕ್ ಹಡಗಿನ ಅವಶೇಷವನ್ನು ಪತ್ತೆಹಚ್ಚಲಾಗಿತ್ತು.





