ಜಾತಿ ತಾರತಮ್ಯಕ್ಕೆ ನೊಂದು ರಾಜೀನಾಮೆ ನೀಡಿದ ಐಐಟಿ-ಮದ್ರಾಸ್ ನ ಅಸಿಸ್ಟೆಂಟ್ ಪ್ರೊಫೆಸರ್

ಚೆನ್ನೈ: ಜಾತಿ ತಾರತಮ್ಯ ಆರೋಪಿಸಿ ಐಐಟಿ ಮದ್ರಾಸ್ನ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂಸ್ಥೆಯ ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸಾಯನ್ಸಸ್ ವಿಭಾಗದ ಸಹಾಯಕ ಪ್ರೊಫೆಸರ್ ವಿಪಿನ್ ಪಿ ವೀಟಿಲ್ ಎಂಬವರು ತಮ್ಮ ಇತರ ಸಹೋದ್ಯೋಗಿಗಳಿಗೆ ಬರೆದ ಇಮೇಲ್ ಒಂದು ಸೋರಿಕೆಯಾದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಅಧಿಕಾರಸ್ಥ ಹುದ್ದೆಗಳನ್ನು ಹೊಂದಿದವರಿಂದ ತಾರತಮ್ಯವಾಗಿದೆ. ಇಂತಹ ಹಲವು ತಾರತಮ್ಯಕಾರಿ ಘಟನೆಗಳು ನಡೆದಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿರಿಸುವುದಾಗಿ ಅವರು ತಮ್ಮ ಇಮೇಲ್ನಲ್ಲಿ ಬರೆದಿದ್ದಾರೆ.
ಸಂಸ್ಥೆಯ ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ಬೋಧಕರು ಇಂತಹುದೇ ಅನುಭವಗಳನ್ನು ಹೊಂದಿದ್ದಲ್ಲಿ ಅದರ ಕುರಿತು ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಬೇಕೆಂದೂ ಅವರು ಸಲಹೆ ನೀಡಿದ್ದಾರೆ. ತಮ್ಮಂತೆ ತಾರತಮ್ಯ ಎದುರಿಸಿದವರು ದೂರು ನೀಡಲು ಮುಂದೆ ಬರಬೇಕೆಂದೂ ಅವರು ಸೂಚಿಸಿದ್ದಾರೆ.
ವಿಪಿನ್ ತಾವು ಐಐಟಿ-ಮದ್ರಾಸ್ ಸೇವೆಗೆ 2019ರಲ್ಲಿ ಸೇರಿದ್ದಾಗಿ ಹೇಳಿದ್ದಾರೆ. ತರುವಾಯ ಐಐಟಿ-ಎಂ ಸ್ವತಂತ್ರ ವಿದ್ಯಾರ್ಥಿ ಸಂಘಟನೆ ಚಿಂತಾಬಾರ್ ಹೇಳಿಕೆ ಬಿಡುಗಡೆಗೊಳಿಸಿ ವಿಪಿನ್ ಪ್ರಕರಣವನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.







