ಗಾಝಿಪುರ್: ಬಿಜೆಪಿ ಕಾರ್ಯಕರ್ತರಿಂದ ರೈತರ ಮೇಲೆ ಹಲ್ಲೆ ಆರೋಪ; ದೂರು ಪ್ರತಿದೂರು ದಾಖಲು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಬುಧವಾರ ಗಝೀಪುರ್ ಗಡಿ ಪ್ರದೇಶದಲ್ಲಿ ಪ್ರತಿಭಟನಾನಿರತ ರೈತರು ಹಾಗೂ ಕೆಲ ಬಿಜೆಪಿ ಕಾರ್ಯಕರ್ತರ ನಡುವೆ ಉಂಟಾದ ಘರ್ಷಣೆಯ ಬಳಿಕ ಇಂದು ಅಲ್ಲಿನ ಪೊಲೀಸರು ಬಿಜೆಪಿ ಬೆಂಬಲಿಗರೆಂದು ತಿಳಿಯಲಾದ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ತಮ್ಮ ಮೇಲೆ ದಾಳಿ ನಡೆಸಿದ್ದರೆಂದು ರೈತ ಪ್ರತಿಭಟನಾಕಾರರು ಹೇಳಿದ್ದರೆ, ರೈತರೇ ತಮ್ಮ ವಾಹನಗಳಿಗೆ ಹಾನಿಗೊಳಿಸಿ ತಮಗೆ ಹಲ್ಲೆ ನಡೆಸಿದ್ದರು ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದರು.
ಘಟನೆ ನಡೆದ ದಿನವೇ ಕೆಲ ರೈತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಹಿಂಸೆಯಲ್ಲಿ ತೊಡಗಿದ ಹಾಗೂ ಹಲ್ಲೆಗೈದ ಆರೋಪದ ಮೇಲೆ ಕೆಲ ಅನಾಮಿಕ ವ್ಯಕ್ತಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಶಾಂತಿಗೆ ಭಂಗ ತಂದಿದ್ದರು, ಪ್ರತಿಭಟನಾಕಾರರನ್ನು ಪ್ರಚೋದಿಸಲು ಯತ್ನಿಸಿದ್ದರು, ಬಿಜೆಪಿ ಕಾರ್ಯಕರ್ತರ ದಾಳಿಯಿಂದ ಕೆಲ ಹಿರಿಯ ಪ್ರತಿಭಟನಾಕಾರರು ಸೇರಿದಂತೆ ಹಲವರು ಗಾಯಗೊಂಡರು ಎಂದು ರೈತರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಬಿಜೆಪಿ ಧ್ವಜಗಳನ್ನು ಹಿಡಿದುಕೊಂಡು ಬಂದಿದ್ದ ಜನರು ಭಾರತೀಯ ಕಿಸಾನ್ ಯೂನಿಯನ್ ಹಾಗೂ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎಂದು ಆರೋಪಿಸಲಾಗಿದೆ.







