ದೇವಸ್ಥಾನಕ್ಕೆ ವಾಟರ್ ಕೂಲರ್ ನೀಡಿದ ಮುಸ್ಲಿಂ ರಾಜಕಾರಣಿಯ ಹೆಸರಿದ್ದುದಕ್ಕೆ ಫಲಕವನ್ನೇ ಒಡೆದ ಬಜರಂಗದಳ ಕಾರ್ಯಕರ್ತರು

photo: hwnews
ಆಲಿಘರ್ : ಬಜರಂಗದಳ ಕಾರ್ಯಕರ್ತರ ಒಂದು ಗುಂಪು ಗುರುವಾರ ಆಲಿಘರ್ ನ ಖೇರೇಶ್ವರ್ ಮಹಾದೇವ್ ದೇವಸ್ಥಾನಕ್ಕೆ ನುಗ್ಗಿ ಅಲ್ಲಿ ವಾಟರ್ ಕೂಲರ್ ಸ್ಥಾಪಿಸುವ ಉದ್ದೇಶದಿಂದ ಅಳವಡಿಸಲಾಗಿದ್ದ ಶಂಕುಸ್ಥಾಪನಾ ಫಲಕವನ್ನು ಹಾನಿಗೈದಿದ್ದಾರೆ.
ಈ ಫಲಕದಲ್ಲಿ ಸಲ್ಮಾನ್ ಶಾಹಿದ್ ಎಂಬ ಮುಸ್ಲಿಂ ರಾಜಕಾರಣಿಯ ಹೆಸರಿದ್ದುದೇ ಈ ಕೃತ್ಯದ ಹಿಂದಿನ ಕಾರಣವೆಂದು ಹೇಳಲಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಬಜರಂಗದಳ ಸದಸ್ಯ ದೀಪಕ್ ರಜಪೂತ್ ಎಂಬಾತನನ್ನು ಬಂಧಿಸಿದ್ದರೂ ಸಂಘಟನೆ ಸದಸ್ಯರು ಲೋಧಾ ಪೊಲೀಸ್ ಠಾಣೆಯೆದುರು ಪ್ರತಿಭಟನೆಗಳನ್ನು ನಡೆಸಿದ ನಂತರ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಸಮಾಜವಾದಿ ಪಕ್ಷದ ಯುವ ಘಟಕದ ರಾಜ್ಯ ಖಜಾಂಜಿಯಾಗಿರುವ ಸಲ್ಮಾನ್ ಅವರು ಆಲಿಘರ್ ನ ಲೋಧಾ ಪ್ರದೇಶದಲ್ಲಿರುವ ಈ ದೇವಸ್ಥಾನಕ್ಕೆ ಎರಡು ದಿನಗಳ ಹಿಂದೆ ವಾಟರ್ ಕೂಲರ್ ದೇಣಿಗೆಯಾಗಿ ನೀಡಿದ್ದರು. ದೇವಸ್ಥಾನದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಹೆಸರು ಇರುವುದು ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಸತೀಶ್ ಗೌತಮ್ ಈ ದುಷ್ಕೃತ್ಯವನ್ನು ಬೆಂಬಲಿಸಿದ್ದಾರೆ.
ಘಟನೆ ಸಂಬಂಧ ದೇವಸ್ಥಾನದ ಸಮಿತಿ ಬುಧವಾರ ಪೊಲೀಸ್ ದೂರು ದಾಖಲಿಸಿದೆ. ಕೆಲ ಸಮಾಜವಿರೋಧಿ ಶಕ್ತಿಗಳು ದೇವಸ್ಥಾನವನ್ನು ಪ್ರವೇಶಿಸಿ ಶಂಕುಸ್ಥಾಪನಾ ಫಲಕಕ್ಕೆ ಹಾನಿಯೆಸಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಮಿತಿ ಮುಖ್ಯಸ್ಥ ಸತ್ಯಪಾಲ್ ಸಿಂಗ್ ಘಟನೆ ಕುರಿತು ತನಿಖೆಗೆ ಕೋರಿದ್ದಾರೆ.
ಜೂನ್ 28ರಂದು ಸಮಾಜವಾದಿ ಪಕ್ಷದ ನಾಯಕ ದೇವಸ್ಥಾನದ ಅಧಿಕಾರಿಗಳ ಜತೆ ಚರ್ಚಿಸಿ ಕೂಲರ್ ನೀಡಿದ್ದರು. "ಅದನ್ನು ಅಳವಡಿಸಲು ಹಾಗೂ ಫಲಕದಲ್ಲಿ ರಾಜಕಾರಣಿಯ ಹೆಸರು ಉಲ್ಲೇಖಿಸುವುದಕ್ಕೆ ನಮಗೇನೂ ಅಭ್ಯಂತರವಿರಲಿಲ್ಲ. ಆದರೆ ಈ ಘಟನೆಯ ನಂತರ ನಾವು ಅವರಿಂದ ಕ್ಷಮೆ ಕೇಳಿದ್ದೇವೆ ಹಾಗೂ ಪಟ್ಟಣದಲ್ಲಿ ಶಾಂತಿ ನೆಲೆಸುವಂತಾಗಲು ಕೂಲರ್ ಅನ್ನು ಅವರಿಗೆ ಮರಳಿಸಿದ್ದೇವೆ" ಎಂದು ಸಿಂಗ್ ಹೇಳಿದ್ದಾರೆ.
#BajrangDal activist breaks the foundation stone of a water cooler donated by #Samajwadiparty (youth wing) leader Salman Shahid to a temple in #Aligarh, as it had his name on it. @aligarhpolice @Uppolice pic.twitter.com/G0vqpRp0D4
— Anuja Jaiswal (@AnujaJaiswalTOI) June 30, 2021







