ಜಿಲ್ಲಾ, ತಾಲೂಕು ಪಂಚಾಯತ್ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಿಸಿದ ಚುನಾವಣಾ ಆಯೋಗ

ಬೆಂಗಳೂರು, ಜು. 2: ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟಿಸಿರುವ ರಾಜ್ಯ ಚುನಾವಣಾ ಆಯೋಗ, ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಜುಲೈ 8ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳ ಚುನಾಯಿತ ಸದಸ್ಯರ ಅಧಿಕಾರಾವಧಿ ಎಪ್ರಿಲ್ ತಿಂಗಳ ಅಂತ್ಯಕ್ಕೆ ಕೊನೆಯಾಗಿದೆ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾಗಿದ್ದು, ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿರುವ ಚುನಾವಣಾ ಆಯೋಗ, ಕರಡು ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದೆ.
ಮೀಸಲಾತಿ ಕರಡು ಅಧಿಸೂಚನೆ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದರೆ ಜು.8ರ ಒಳಗಾಗಿ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ, ಒಂದನೇ ಮಹಡಿ, ಕೆಎಸ್ಸಿಎಂಎಫ್ ಕಟ್ಟಡದ ಹಿಂಭಾಗ, ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು-52 ಈ ವಿಳಾಸಕ್ಕೆ ಕಳುಹಿಸಲು ಚುನಾವಣಾ ಆಯೋಗ ಪ್ರಕಟನೆಯಲ್ಲಿ ಕೋರಲಾಗಿದೆ.





