ಶಿವಮೊಗ್ಗ: ಕೊರೋನದಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಅಗತ್ಯ ಸೌಲಭ್ಯ ನೀಡಲು ಆಗ್ರಹಿಸಿ ಎನ್.ಎಸ್.ಯು.ಐ ಧರಣಿ

ಶಿವಮೊಗ್ಗ, ಜು.2: ಕೊರೋನದಿಂದ ಮೃತಪಟ್ಟ ಕುಟುಂಬಸ್ಥರಿಗೆ ಶೀಘ್ರವೇ ಅಗತ್ಯ ಸೌಲಭ್ಯ ತಲುಪಿಸುವಂತೆ ಆಗ್ರಹಿಸಿ ಎನ್.ಎಸ್.ಯು.ಐ. ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಮಾರಣಾಂತಿಕ ಕೊರೋನ ನೂರಾರು ಕುಟುಂಬಗಳ ನೆಮ್ಮದಿ ಕಸಿದುಕೊಂಡಿದೆ. ಕೊರೋನದಿಂದ ಮೃತಪಟ್ಟ ಕುಟುಂಬಸ್ಥರಿಗೆ ಸಮಯಕ್ಕೆ ಸರಿಯಾಗಿ ಸೌಲಭ್ಯ ಸಿಗದೆ ಪರದಾಡುವ ದೃಶ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ. ಅನೇಕ ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಅಗತ್ಯ ಸೌಲಭ್ಯ ಸಿಗದ ಬೇಸರ ಮತ್ತೊಂದೆಡೆ. ಮೊದಲೇ ನೊಂದಿರುವ ಕುಟುಂಬಸ್ಥರಿಗೆ ಅಧಿಕಾರಿಗಳು ಹಾಗೂ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ದೂರಿದರು.
ಕೊರೋನದಿಂದ ಮೃತಪಟ್ಟವರಿಗೆ ಒಂದು ಲಕ್ಷ ರೂ. ನೀಡುವುದಾಗಿ ಹೇಳಿ ಹಲವು ದಿನಗಳು ಕಳೆದಿದ್ದರೂ ಸಹ ಇದುವರೆಗೆ ಹಣ ತಲುಪಿಲ್ಲ. ಇನ್ನು ಕೊರೋನದಿಂದ ಮೃತಪಟ್ಟವರ ಮರಣ ಪ್ರಮಾಣಪತ್ರ ಪಡೆಯಲು ಕುಟುಂಬಸ್ಥರು ವಾರಗಟ್ಟಲೇ ಕಚೇರಿಗೆ ಅಲೆದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಕೊರೋನದಿಂದ ಮೃತಪಟ್ಟವರ ಕುಟುಂಬದವರ ನೆರವಿಗೆ ಧಾವಿಸಬೇಕು. ಸರ್ಕಾರಿ ಉದ್ಯೋಗಿಗಳು ಮೃತಪಟ್ಟಿದ್ದರೆ ಅವರ ಕುಟುಂಬಸ್ಥರಿಗೆ ಉದ್ಯೋಗ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ಹೆಚ್.ಎಸ್. ಬಾಲಾಜಿ, ರವಿ, ವಿಜಯ್, ಗಿರೀಶ್, ಸಂದೇಶ್, ಸಂದೀಪ್, ಭರತ್, ಆಕಾಶ್, ರವಿ, ಮಂಜು, ಚಂದ್ರೋಜಿರಾವ್ ಸೇರಿದಂತೆ ಇತರರಿದ್ದರು.







