ಚಿಕ್ಕಮಗಳೂರು: ಜಿಲ್ಲಾಧಿಕಾರಿ ಕಚೇರಿ ಎದುರು ವೈಎಸ್‍ವಿ ದತ್ತ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ರೈತರಿಗೆ 127 ಕೋಟಿ ರೂ. ಬಾಕಿ ಹಣ ಪಾವತಿಸಲು ಆಗ್ರಹ

ಚಿಕ್ಕಮಗಳೂರು, ಜು.2: ರಾಗಿ ಖರೀದಿ ಕೇಂದ್ರಗಳಲ್ಲಿ ರೈತರು ಮಾರಾಟ ಮಾಡಿರುವ ರೈತರಿಗೆ ಬಾಕಿ ಹಣ ಪಾವತಿ, ಕಡೂರು ಪುರಸಭೆ ಸ್ವತ್ತು ಸಂರಕ್ಷಿಸುವುದು ಹಾಗೂ ಬಗರ್ ಹುಕುಂ ಸಾಗುವಳಿ ವಿತರಣೆಯಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾಜಿ ಶಾಸಕ ವೈಎಸ್‍ವಿ ದತ್ತ ನೇತೃತ್ವದಲ್ಲಿ ಜೆಡಿಎಸ್ ಸೇರಿದಂತೆ ದಲಿತ, ರೈತ ಸಂಘಟನೆಗಳ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರು ಸಭೆ ನಡೆಸುತ್ತಿದ್ದ ವೇಳೆ ದಿಢೀರ್ ಧರಣಿ ನಡೆಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ವಿವಿಧ ಇಲಾಖಾಧಿಕಾರಿಗಳ ಸಭೆ ಕರೆದಿದ್ದರು. ಬೆಳಗ್ಗೆ 11ಕ್ಕೆ ಈ ಸಭೆ ನಡೆಯುತ್ತಿದ್ದ ವೇಳೆ ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಶಾಸಕ ವೈಎಸ್‍ವಿ ದತ್ತ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧಕ್ಷ ಎಚ್.ಎಚ್.ದೇವರಾಜ್, ಜಿಲ್ಲಾ ಮುಖಂಡರಾದ ಚಂದ್ರಪ್ಪ, ಮಂಜಪ್ಪ ಹಾಗೂ ದಸಂಸ ಸಂಘಟನೆಯ ಮರ್ಲೆ ಅಣ್ಣಯ್ಯ, ರೈತ ಸಂಘದ ಗುರುಶಾಂತಪ್ಪ ಮತ್ತಿತರ ಮುಖಂಡರು, ಕಾರ್ಯಕರ್ತರು ನಿಷೇದಾಜ್ಞೆ ಇದ್ದರೂ ಲೆಕ್ಕಿಸದೇ ಡಿಸಿ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಿಢೀರ್ ಧರಣಿ ನಡೆಸಿದರು.
ಧರಣಿಯ ಸುದ್ದಿ ತಿಳಿದ ಎಡಿಸಿ ರೂಪಾ ಅವರು ಸಚಿವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯ ಮಧ್ಯೆಯೇ ಎದ್ದು ಬಂದು ಧರಣಿ ನಿರತರನ್ನು ಭೇಟಿಯಾದರು. ಈ ವೇಳೆ ತಮ್ಮ ಸಮಸ್ಯೆಗಳನ್ನು ಸಚಿವ ಬಳಿ ಹೇಳಿಕೊಳ್ಳಬೇಕು. ಮನವಿಯನ್ನು ಸಚಿವರಿಗೇ ಸಲ್ಲಿಸುವುದಾಗಿ ವೈಎಸ್‍ವಿ ದತ್ತ ಹೇಳಿದರು. ಆಗ ಎಡಿಸಿ ರೂಪಾ, ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿರುವುದರಿಂದ ಸಭೆ ಮುಗಿಯುವುದು ತಡವಾಗುತ್ತದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು. ಸಚಿವರು ಸಭೆ ಮುಗಿಸಿಯೇ ಬರಲಿ, ಎಷ್ಟು ಹೊತ್ತಾದರೂ ನಾವು ಕಾಯುತ್ತೇವೆ. ಅವರ ಬಳಿ ರೈತರ ಸಮಸ್ಯೆ ಹೇಳಿಕೊಳ್ಳುವುದಿದೆ ಎಂದು ವೈಎಸ್‍ವಿ ದತ್ತ ಪ್ರತಿಕ್ರಿಯಿಸಿದರು. ಎಡಿಸಿ ಅಲ್ಲಿಂದ ಹಿಂದಿರುಗಿದ ಬಳಿಕ ಸುಮಾರು ಅರ್ಧ ಗಂಟೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಸಭೆಯ ಮಧ್ಯೆ ಕಚೇರಿಯಿಂದ ಹೊರ ಬಂದು ಧರಣಿ ನಿರತರನ್ನು ಭೇಟಿಯಾದರು.
ಈ ವೇಳೆ ಮಾತನಾಡಿದ ವೈಎಸ್‍ವಿ ದತ್ತ, ಜಿಲ್ಲೆಯಲ್ಲಿ ರಾಗಿ ಬೆಳೆದ ರೈತರು ರಾಗಿ ಖರೀದಿ ಕೇಂದ್ರಗಳಿಗೆ ಕಳೆದ ಮಾರ್ಚ್ ತಿಂಗಳಲ್ಲಿ ರಾಗಿ ಮಾರಾಟ ಮಾಡಿದ್ದು, ಇದರ ಬಾಕಿ ಹಣ ನೀಡದೇ ಸತಾಯಿಸಲಾಗುತ್ತಿದೆ. ಕಡೂರು ತಾಲೂಕಿಗೆ ರಾಗಿ ಮಾರಾಟ ಮಾಡಿರುವು ರೈತರಿಗೆ 127 ಕೋ. ರೂ. ಬಾಕಿ ಪಾವತಿಯಾಗಬೇಕಿದೆ. ಅಧಿಕಾರಿಗಳನ್ನು ವಿಚಾರಿಸಿದರೇ ಸರಕಾರದಿಂದ ಹಣ ಬಂದಿಲ್ಲ ಎನ್ನುತ್ತಿದ್ದಾರೆ. ರಾಗಿ ಮಾರಿದ ಹಣ ಕೈಗೆ ಸಿಗದೆ ರೈತರು ಮತ್ತೆ ಕೃಷಿ ಮಾಡಲೂ ಹಣವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರೈತರ ಬಾಕಿ ಹಣ ಬಿಡುಗಡೆಗೆ ಕ್ರಮವಹಿಸಬೇಕು. ಕಡೂರು ಪುರಸಭೆಗೆ ಸೇರಿದ ಸರಕಾರಿ ಜಾಗವನ್ನು ಪ್ರಭಾವಿ ವ್ಯಕ್ತಿಯೊಬ್ಬರು ರಾತ್ರೋರಾತ್ರಿ ನಕಲಿ ದಾಖಲೆ ಸೃಷ್ಟಿಸಿ ಪುಸಭೆ ಸ್ವತ್ತನ್ನು ಕಬಳಿಸಿದ್ದಾರೆ. ಅಲ್ಲದೆ ತಾನು ಬಗರ್ ಹುಕುಂ ಯೋಜನೆಯಡಿ ರೈತರಿಗೆ ನೀಡಲಾದ ಸಾಗುವಳಿ ಚೀಟಿಗಳ ಖಾತೆಯಾಗದಿರುವುದರಿಂದ ಸಾಗುವಳಿದಾರರ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಸಂಬಂಧ ತನಿಖೆ ನಡೆಸಿ ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಸ್.ಅಂಗಾರ, ಮೂರು ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮವಹಿಸುವ ಭರವಸೆ ನೀಡಿದರು. ಬಳಿಕ ಧರಣಿಯನ್ನು ಹಿಂಪಡೆಯಲಾಯಿತು.







