ಬಿಜೆಪಿ ಸಂಸದನ ನಕಲಿ ಪದವಿ ಪ್ರಕರಣ: ಉತ್ತರಿಸಲು ಜಾರ್ಖಂಡ್ ಪೊಲೀಸರಿಗೆ ಕೊನೆಯ ಅವಕಾಶ

ರಾಂಚಿ,ಜು.2: ಜಾರ್ಖಂಡ್ ಉಚ್ಚ ನ್ಯಾಯಾಲಯವು ಬಿಜೆಪಿ ಸಂಸದ(ಗೊಡ್ಡಾ) ನಿಶಿಕಾಂತ ದುಬೆ ಅವರ ವಿರುದ್ಧದ ನಕಲಿ ಪದವಿ ಪ್ರಕರಣದಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸಲು ರಾಜ್ಯ ಪೊಲೀಸರು ಮತ್ತು ದೂರುದಾರರಿಗೆ ಕೊನೆಯ ಅವಕಾಶವನ್ನು ನೀಡಿದೆ.
ಗುರುವಾರ ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾ.ಎಸ್.ಕೆ.ದ್ವಿವೇದಿ ಅವರ ಪೀಠವು ಸಂಸದರಿಗೆ ಅನಗತ್ಯವಾಗಿ ಕಿರುಕುಳ ನೀಡದಂತೆ ಪೊಲೀಸರಿಗೆ ಆದೇಶಿಸಿತು.
ಎರಡು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ಪೊಲೀಸರು ಮತ್ತು ದೂರುದಾರರಿಗೆ ಸೂಚಿಸಿದ ನ್ಯಾಯಾಲಯವು,ಇದು ಕೊನೆಯ ಅವಕಾಶವಾಗಿದೆ ಎಂದು ಸ್ಪಷ್ಟಪಡಿಸಿತು.
ದುಬೆ ಅವರು ದಿಲ್ಲಿ ವಿವಿಯಿಂದ ನಕಲಿ ಮ್ಯಾನೇಜ್ ಮೆಂಟ್ ಪದವಿಯನ್ನು ಪಡೆದಿದ್ದಾರೆ ಎಂದು ಆಡಳಿತ ಜೆಎಂಎಂ ಮತ್ತು ಮುಖ್ಯಮಂತ್ರಿ ಹೇಮಂತ ಸೊರೇನ್ ಕಳೆದ ವರ್ಷದ ಜುಲೈನಲ್ಲಿ ಆರೋಪಿಸಿದ್ದರು. ಈ ಬಗ್ಗೆ ವಿಷ್ಣುಕಾಂತ ಝಾ ಎನ್ನುವವರು ದೇವಗಡ ಠಾಣೆಯಲ್ಲಿ ದುಬೆ ವಿರುದ್ಧ ದಾಖಲಿಸಿದ್ದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ತನ್ನ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ದುಬೆ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು. ಆದರೆ ದೂರುದಾರ ಮತ್ತು ರಾಜ್ಯ ಸರಕಾರ ಪ್ರಕರಣದಲ್ಲಿ ತಮ್ಮ ದೂರುಗಳನ್ನು ನ್ಯಾಯಾಲಯಕ್ಕೆ ಇನ್ನೂ ಸಲ್ಲಿಸಿಲ್ಲ.
ದುಬೆ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ತನ್ನ ಮಧ್ಯಂತರ ಆದೇಶದ ಅವಧಿಯನ್ನೂ ಉಚ್ಚ ನ್ಯಾಯಾಲಯವು ವಿಸ್ತರಿಸಿದೆ.ʼ







