ದತ್ತು ಸ್ವೀಕಾರ ಅನಾಥ, ಪರಿತ್ಯಕ್ತ ಮಕ್ಕಳಿಗೆ ಮಾತ್ರ ಸೀಮಿತವಲ್ಲ: ಬಾಂಬೆ ಹೈಕೋರ್ಟ್

ನಾಗ್ಪುರ(ಮಹಾರಾಷ್ಟ್ರ),ಜು.2: ದತ್ತು ಸ್ವೀಕಾರವನ್ನು ಅನಾಥರಾಗಿರುವ,ಹೆತ್ತವರಿಂದ ಪರಿತ್ಯಕ್ತ ಮತ್ತು ಕಾನೂನು ಸಂಘರ್ಷದಲ್ಲಿರುವ ಮಕ್ಕಳಿಗೆ ಮಾತ್ರ ಸೀಮಿತಗೊಳಿಸುವಂತಿಲ್ಲ. ಮಕ್ಕಳ ಬಂಧುಗಳೂ ಅವರನ್ನು ದತ್ತು ಪಡೆಯಲು ಬಾಲಾಪರಾಧಿ ನ್ಯಾಯ ಕಾಯ್ದೆಯು ಅನುಮತಿಸಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯದ ನಾಗ್ಪುರ ಪೀಠವು ಎತ್ತಿಹಿಡಿದಿದೆ.
ತಮ್ಮ ಅಪ್ರಾಪ್ತ ವಯಸ್ಕ ಸೋದರ ಸೊಸೆಯನ್ನು ದತ್ತು ಪಡೆಯಲು ಬಯಸಿ ದಂಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ಮನೀಷ್ ಪಿತಳೆ ಅವರ ಏಕ ನ್ಯಾಯಾಧೀಶ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ದಂಪತಿ ಮಗುವಿನ ಸೋದರಮಾವ ಮತ್ತು ಸೋದರತ್ತೆಯಾಗಿದ್ದು,ಹೆತ್ತವರು ದತ್ತು ನೀಡಲು ಒಪ್ಪಿಕೊಂಡಿದ್ದಾರೆ.
ತಾವು ಸಲ್ಲಿಸಿದ್ದ ಅರ್ಜಿಯನ್ನು ಯವತ್ಮಾಲ್ ಜಿಲ್ಲಾ ನ್ಯಾಯಾಲಯವು ಮಗುವು ಅನಾಥ ಅಥವಾ ಹೆತ್ತವರಿಂದ ಪರಿತ್ಯಕ್ತವಲ್ಲ,ಕಾನೂನಿನ ಸಂಘರ್ಷಕ್ಕೆ ಸಿಲುಕಿಲ್ಲ ಮತ್ತು ಬೇರೆಯವರ ಆರೈಕೆ ಹಾಗೂ ರಕ್ಷಣೆಯ ಅಗತ್ಯವೂ ಅದಕ್ಕಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಿದ ಬಳಿಕ ದಂಪತಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯು ಬಂಧುಗಳಿಂದ ಮಕ್ಕಳ ದತ್ತು ಮತ್ತು ಮಲಪೋಷಕರಿಂದ ದತ್ತು ಪ್ರಕ್ರಿಯೆಗೂ ಅನುಮತಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಮಗುವಿನ ಸೋದರಮಾವ ಮತ್ತು ಸೋದರತ್ತೆಯಾಗಿರುವುದರಿಂದ ಕಾಯ್ದೆಯಡಿ ‘ಬಂಧು’ ವ್ಯಾಖ್ಯೆಯಲ್ಲಿ ಸೇರುತ್ತಾರೆ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.







