ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಹಣ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆ

ಬೆಂಗಳೂರು, ಜು. 2: `ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ(ಎಸ್ಸಿ-ಎಸ್ಟಿ) ಕಲ್ಯಾಣಕ್ಕಾಗಿ ಮೀಸಲಿಟ್ಟ ಎಸ್‍ಸಿಪಿ ಹಾಗೂ ಟಿಎಸ್ಪಿ ಅನುದಾನವನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ವರ್ಗಾಯಿಸದೆ, ಆ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸದ್ಬಳಕೆ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ 2021-22ನೆ ಸಾಲಿನ ರಾಜ್ಯ ಅನುಸೂಚಿತ ಜಾತಿಗಳು/ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿನ ಸಭೆಯ ಬಳಿಕ ಮಾತನಾಡಿದ ಅವರು, `ಎಸ್ಸಿ-ಎಸ್ಟಿಗಳ ಸಮಗ್ರ ಅಭಿವೃದ್ದಿಗಾಗಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ಅಧಿನಿಯಮ-2013ನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಯ್ದೆಯನ್ವಯ ರಾಜ್ಯ ಅಭಿವೃದ್ದಿ ಪರಿಷತ್ ಸಭೆ ನಡೆಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ' ಎಂದು ಹೇಳಿದರು.
`2021-22ನೆ ಸಾಲಿನಲ್ಲಿ ಪರಿಶಿಷ್ಟ ಜಾತಿ(ಎಸ್ಸಿ) ಅಭಿವೃದ್ಧಿಗೆ 18,331 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡ(ಎಸ್ಟಿ)ದ ಅಭಿವೃದ್ಧಿಗಾಗಿ 7,673 ಕೋಟಿ ರೂ. ಸೇರಿದಂತೆ ಒಟ್ಟಾರೆಯಾಗಿ 26,005 ಕೋಟಿ ರೂ.ಅನುದಾನವನ್ನು 35 ಇಲಾಖೆಗಳಿಗೆ ಒದಗಿಸಲಾಗಿದೆ' ಎಂದ ಅವರು, `ಇಂದಿನ ರಾಜ್ಯ ಪರಿಷತ್ ಸಭೆಯಲ್ಲಿ ಎಲ್ಲ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗಿದೆ.
ಎಸ್‍ಸಿಎಸ್‍ಪಿ/ಟಿಎಸ್‍ಪಿ ನಿಯಮಗಳು-2017ರ ಅನ್ವಯ ಮುಂದುವರಿದ ಕಾಮಗಾರಿಗಳಿಗೆ ಮೊದಲನೆ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಿ, ಅನುಷ್ಠಾನಕ್ಕೆ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನೋಡಲ್ ಏಜೆನ್ಸಿ ಸಭೆ ನಡೆಸಿ ವಿವಿಧ ಇಲಾಖೆಗಳು ಸಲ್ಲಿಸಿರುವ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡು ಹಾಗೂ ಶಿಫಾರಸ್ಸುಗಳೊಂದಿಗೆ ರಾಜ್ಯ ಪರಿಷತ್ ಅನುಮೋದನೆಗೆ ಕ್ರಿಯಾ ಯೋಜನೆ ಮಂಡಿಸಲಾಯಿತು. ಈ ಕ್ರಿಯಾ ಯೋಜನೆಯನ್ನು ಎಲ್ಲ ಇಲಾಖೆಗಳಿಗೆ ಕಳುಹಿಸಿ, ಆಯಾ ಇಲಾಖೆಗಳು ಅಗತ್ಯವಿದ್ದಲ್ಲಿ ಸರಕಾರಿ ಆದೇಶಗಳನ್ನು ಹೊರಡಿಸಿ, ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ, ಆರ್ಥಿಕ, ಶಿಕ್ಷಣ, ಆರೋಗ್ಯ ಮತ್ತು ಇತರೆ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಮೂಲಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಎಸ್ಸಿ-ಎಸ್ಟಿ ವರ್ಗದ ಜನರಿಗೆ ಅನುಕೂಲವಾಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಶೇ.100ರಷ್ಟು ಗುರಿಯನ್ನು ಸಾಧಿಸಬೇಕು. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಭೂಮಿ ಹಂಚಿಕೆ ಮತ್ತಿತರ ಯಾವುದೇ ಸೌಲಭ್ಯ ವಿತರಿಸುವ ವೇಳೆ ಜಂಟಿ ಹೆಸರಿನಲ್ಲೆ ನೀಡಬೇಕು ಎಂದು ಯಡಿಯೂರಪ್ಪ ಸಲಹೆ ಮಾಡಿದರು.
ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಶೌಚಾಲಯ/ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿಸಿ ನೀಡುತ್ತಿರುವ ಸಹಾಯಧನವನ್ನು ತಲಾ 15 ಸಾವಿರ ರೂ.ಗಳಿಂದ 20 ಸಾವಿರ ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಯಿತು. ಈ ಕಾರ್ಯಕ್ರಮಗಳ ಅನುಷ್ಠಾನ ದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಜನರ ಬದುಕಿನ ಮಟ್ಟ ಸುಧಾರಣೆಗೆ ಪೂರಕವಾಗುವಂತೆ ಈ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಯಡಿಯೂರಪ್ಪ ತಿಳಿಸಿದರು.
ಶೇ.95ರಷ್ಟು ಪ್ರಗತಿ: 2020-21ನೆ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ದಿಗಾಗಿ 18,131ಕೋಟಿ ರೂ.ಗಳನ್ನು ಒದಗಿಸಿದ್ದು, 17,352 ಕೋಟಿ ರೂ.ಗಳು ವೆಚ್ಚವಾಗಿರುತ್ತದೆ. ಶೇ.96ರಷ್ಟು ಪ್ರಗತಿಯಾಗಿದೆ. ಅದೇ ರೀತಿ ಪರಿಶಿಷ್ಟ ಪಂಗಡದವರ ಅಭಿವೃದ್ದಿಗಾಗಿ 7,814 ಕೋಟಿ ರೂ.ಗಳನ್ನು ಒದಗಿಸಿದ್ದು, 7,294ಕೋಟಿ ರೂ.ಗಳು ವೆಚ್ಚವಾಗಿರುತ್ತದೆ. ಶೇ.93ರಷ್ಟು ಪ್ರಗತಿ. 36 ಇಲಾಖೆಗಳಿಂದ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದ್ದು, ಒಟ್ಟಾರೆ ಎಸ್ಸಿಪಿ-ಟಿಎಸ್ಪಿ ಅಡಿಯಲ್ಲಿ ಹಂಚಿಕೆ ಮಾಡಿದ್ದ 25,945 ಕೋಟಿ ರೂ.ಗಳಲ್ಲಿ, 24,646 ಕೋಟಿ ರೂ.ಗಳ ವೆಚ್ಚ ಮಾಡಿದ್ದು, ಶೇ.95ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ, ಲಕ್ಷ್ಮಣ್ ಸವದಿ, ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ರಾಜುಗೌಡ, ಎನ್.ಮಹೇಶ್, ಎಸ್.ರಘು, ಐಹೊಳೆ ದುರ್ಯೋಧನ ಹಾಗೂ ಸಂಸದ ಡಾ.ಜಿ.ಉಮೇಶ್ ಜಾಧವ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ಡಾ. ಎನ್.ನಾಗಾಂಬಿಕದೇವಿ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದದ್ದರು.
`ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ಯಾವುದೇ ಸಂದರ್ಭದಲ್ಲಿಯೂ ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ಸೂಚನೆ ನೀಡಲಾಗಿದೆ. ಆ ಸಮುದಾಯದ ಕಲ್ಯಾಣಕ್ಕೆ ಸದ್ಬಳಕೆ ಮಾಡಲಾಗುವುದು. ಅಧಿಕಾರಿಗಳು ಸ್ವಯಂ ಪ್ರೇರಿತರಾಗಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಬೇಕು. ಇದರಲ್ಲಿ ಯಾವುದೇ ಲೋಪವಾದಲ್ಲಿ ಕಾಯ್ದೆಯನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು'
-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ






.jpg)
.jpg)
_0.jpg)

