ಕೆನಡದಲ್ಲಿ ಬಿಸಿ ಗಾಳಿಯ ನಡುವೆ ಬೆಂಕಿ: 1,000ಕ್ಕೂ ಅಧಿಕ ಮಂದಿಯ ಸ್ಥಳಾಂತರ

photo:/twitter@ajplus
ವ್ಯಾಂಕೋವರ್ (ಕೆನಡ), ಜು. 2: ಕೆನಡದಲ್ಲಿ ಹಿಂದೆಂದೂ ಕಾಣದ ಉಷ್ಣ ಮಾರುತ ಹಬ್ಬುತ್ತಿರುವ ನಡುವೆಯೇ ಅಲ್ಲಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಬೆಂಕಿಯ ಬೆದರಿಕೆಯ ಹಿನ್ನೆಲೆಯಲ್ಲಿ ಪಶ್ಚಿಮ ಕೆನಡದಲ್ಲಿ ಸುಮಾರು 1,000 ಮಂದಿಯನ್ನು ಗುರುವಾರ ಸ್ಥಳಾಂತರಿಸಲಾಗಿದೆ. ಕನಿಷ್ಠ ಒಂದು ಪಟ್ಟಣವು ಬಹುತೇಕ ಸುಟ್ಟು ಹೋಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಬ್ರಿಟಿಶ್ ಕೊಲಂಬಿಯ ರಾಜ್ಯದಲ್ಲಿ 62 ಹೊಸ ಬೆಂಕಿ ಪ್ರಕರಣಗಳು ಸಂಭವಿಸಿವೆ ಎಂದು ರಾಜ್ಯದ ಪ್ರೀಮಿಯರ್ ಜಾನ್ ಹೊರ್ಗನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವ್ಯಾಂಕೋವರ್ ನಗರದಿಂದ ಈಶಾನ್ಯಕ್ಕೆ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಲೈಟನ್ ಪಟ್ಟಣದ 90 ಶೇಕಡ ಭಾಗ ಸುಟ್ಟು ಹೋಗಿದೆ. ಪಟ್ಟಣದ ಕೇಂದ್ರ ಭಾಗವೂ ನಾಶಗೊಂಡಿದೆ ಎಂದು ಸ್ಥಳೀಯ ಸಂಸದ ಬ್ರಾಡ್ ವಿಸ್ ಹೇಳಿದರು.
ಪಟ್ಟಣದ 250 ನಿವಾಸಿಗಳನ್ನು ಬುಧವಾರ ಸಂಜೆಯೇ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿತ್ತು.
Next Story





