ಬಂಧಿಸಿದ 24 ಗಂಟೆಯೊಳಗೆ ಸಚಿವ ಶ್ರೀರಾಮುಲು ಆಪ್ತ ಸಹಾಯಕನ ಬಿಡುಗಡೆ

ಬೆಂಗಳೂರು, ಜು.2: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಹೆಸರು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರ ವಶದಲ್ಲಿದ್ದ ಸಚಿವ ಶ್ರೀರಾಮುಲು ಆಪ್ತ ಆಪ್ತ ಸಹಾಯಕನನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಲಾಗಿದೆ.
ಗುರುವಾರ ವಶಕ್ಕೆ ಪಡೆಯಲಾಗಿದ್ದ ರಾಜು ಯಾನೆ ರಾಜಣ್ಣ(35) ಎಂಬಾತನನ್ನು ವಿಚಾರಣೆ ನಡೆಸಿ ಶುಕ್ರವಾರ ಮುಂಜಾನೆಯೇ ಬಿಡಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಬಳ್ಳಾರಿ ನಿವಾಸಿ ರಾಜಣ್ಣ ವಿರುದ್ಧ ವಿಜಯೇಂದ್ರ ನೀಡಿದ್ದ ದೂರು ಆಧರಿಸಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಬಿಟ್ಟುಕಳುಹಿಸಲಾಗಿದೆ. ವಿಚಾರಣೆ ಅಗತ್ಯವಿದ್ದರೆ ಮತ್ತೊಮ್ಮೆ ಬರುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬಿಡುಗಡೆ ಬಳಿಕ ಪ್ರತಿಕ್ರಿಯಿಸಿದ ರಾಜಣ್ಣ, ಸುಮಾರು 20 ವರ್ಷಗಳಿಂದ ಸಚಿವ ಬಿ.ಶ್ರೀರಾಮುಲು ಅವರ ನೆರಳಿನಲ್ಲಿ ಬದುಕುತ್ತಿದ್ದೇನೆ. ಸಚಿವರು ಪ್ರಾಮಾಣಿಕವಾಗಿ ನೂರಾರು ಮಂದಿಗೆ ಅಳಿಲು ಸೇವೆ ಸಲ್ಲಿಸುತ್ತಿದ್ದು, ಅವರ ಜೊತೆ ಒಬ್ಬನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ ಎಂದರು.
ಶ್ರೀರಾಮುಲು ಅಥವಾ ಬೇರೆ ಯಾವುದೇ ನಾಯಕರಿಗೆ ಕಳಂಕ ತರುವ ಕೆಲಸ ಎಂದೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಇನ್ನು, ವಂಚನೆ ಪ್ರಕರಣ ಸಂಬಂಧ ಬಿ.ವೈ.ವಿಜಯೇಂದ್ರ ಅವರ ಕುರಿತ ಯಾವುದೇ ಆಡಿಯೊದಲ್ಲಿ ನಾನು ಭಾಗಿಯಾಗಿಲ್ಲ. ಪೊಲೀಸರು ಈ ಕುರಿತು ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ವಿಚಾರಣೆ ವೇಳೆ ನನ್ನದು ಎನ್ನಲಾದ ಆಡಿಯೊ ಕೇಳಿಸಿದರು. ಬಳಿಕ ಅವರು ಧ್ವನಿ ನನ್ನದಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ಮನವರಿಕೆಯಾಗಿದೆ. ನನ್ನ ಕುರಿತ ಸತ್ಯಾಂಶ ಅವರಿಗೆ ಮನವರಿಕೆಯಾಗಿದೆ ಎಂದು ತಿಳಿಸಿದರು.
ಹೇಳದೇ ಬಂಧಿಸಿದ್ದು ಬೇಸರವಾಯಿತು
ರಾಜಣ್ಣ ನನಗೆ ಗೊತ್ತಿರುವ ಹುಡುಗ. ನನಗೆ ಹೇಳದೇ ಆತನನ್ನು ಬಂಧಿಸಿದ್ದಕ್ಕೆ ಬೇಸರವಾಗಿದೆ. ಆದರೆ, ಅಸಮಾಧಾನ ಇಲ್ಲ. ಆತನ ಬಂಧನದ ವಿಚಾರವನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಯಾರೂ ಕೂಡ ಬೇರೆ ಯಾರದ್ದೇ ಹೆಸರು ದುರ್ಬಳಕೆ ಮಾಡಿಕೊಳ್ಳಬಾರದು. ಅದು ತಪ್ಪು.
-ಬಿ.ಶ್ರೀರಾಮುಲು, ಸಚಿವ







