ಜೀವ ವೈವಿಧ್ಯ ಸಂರಕ್ಷಣೆಗೆ ಸ್ಥಳಿಯರೇ ಮುಂದಾಗಬೇಕು: ಯಡಿಯೂರಪ್ಪ

ಬೆಂಗಳೂರು, ಜು.2: ಕನ್ನಡನಾಡಿನ ಕೆರೆ, ನದಿ, ಕಣಿವೆಗಳು, ನಿಸರ್ಗ ಸಂಪತ್ತು ಸಂರಕ್ಷಣೆಗೆ ಸ್ಥಳೀಯ ಜನರೇ ಮುಂದಾಗಬೇಕು. ಈ ಬಗ್ಗೆ ಜಾಗೃತಿ ಉಂಟು ಮಾಡಲು ಜೀವ ವೈವಿಧ್ಯ ಮಂಡಳಿ ರಚನಾತ್ಮಕ ಆಂದೋಲನ ಕೈಗೆತ್ತಿಕೊಂಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಜೀವ ವೈವಿಧ್ಯ ಮಂಡಳಿ ಆಯೋಜಿಸಿರುವ ರಾಜ್ಯವ್ಯಾಪಿ ಜೀವ ವೈವಿಧ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರಕಾರ ಬಜೆಟ್‍ನಲ್ಲಿ ನವೀನ ಪರಿಸರ-ಅರಣ್ಯ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿದೆ. ತುಮಕೂರು ಹಾಗೂ ಉಡುಪಿಯಲ್ಲಿ ಜೀವವೈವಿಧ್ಯ ಮಂಡಳಿ ಕೋರಿಕೆಯಂತೆ ಸ್ಮøತಿ ವನ ನಿರ್ಮಾಣ ಮಾಡಲಿದೆ. ನಾಡಿನ ಜಲ-ಜಂಗಲ್ ಸಂರಕ್ಷಣೆಗೆ ಜೀವ ವೈವಿಧ್ಯ ಅಭಿಯಾನ ಕೊಡುಗೆ ನೀಡಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಜೀವ ವೈವಿಧ್ಯ ಜಾಗೃತಿ ಅಭಿಯಾನವನ್ನು ಜು.1ರಿಂದ ಆ.15ರವರೆಗೆ ರಾಜ್ಯದೆಲ್ಲೆಡೆ ನಡೆಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ತಳ ಮಟ್ಟದಲ್ಲಿ ಪಂಚಾಯತ್‍ಗಳ, ನಗರ ಸಂಸ್ಥೆಗಳಲ್ಲಿ ರಚಿಸಲಾಗಿರುವ ಜೀವ ವೈವಿಧ್ಯ ಸಮಿತಿಗಳನ್ನು ಸಕ್ರಿಯಗೊಳಿಸಬೇಕು. ಸ್ಥಾನಿಕವಾಗಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿನ ನಿಸರ್ಗ ಸಂಪತ್ತಿನ ಪರಿಸ್ಥಿತಿಯ ಅವಲೋಕನವಾಗಬೇಕು. ಕೆರೆಗಳ ಪುನಶ್ಚೇತನ, ವನಗಳ ಪುನಶ್ಚೇತನ ಕಾರ್ಯಗಳಲ್ಲಿ ಜನತೆ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಜೀವ ವೈವಿಧ್ಯ ಜಾಗೃತಿ ಅಭಿಯಾನವನ್ನು ರೂಪಿಸಲಾಗಿದೆ ಎಂದರು.
ಸಂಘ-ಸಂಸ್ಥೆ, ಶಿಕ್ಷಣ ಸಂಸ್ಥೆಗಳು ನಗರ ಸಭೆಗಳು, ಪಂಚಾಯತ್‍ರಾಜ್ ಸಂಸ್ಥೆಗಳ ಮೂಲಕ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವೃಕ್ಷಾರೋಪಣ, ಕೆರೆಗಳ ಸಮೀಕ್ಷೆ, ಸಾಧಕರಿಗೆ ಸಂಮಾನ, ಸ್ಪರ್ಧೆ, ಸಸಿಸಂತೆ, ಜೀವ ವೈವಿಧ್ಯ ದಾಖಲಾತಿ ವರಿದಿಗಳ ಬಿಡುಗಡೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಅರಣ್ಯ ಇಲಾಖೆ, ಪಂಚಾಯತ್‍ರಾಜ್ ಇಲಾಖೆ, ನಗರ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಅಭಿಯಾನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರಾವಳಿಯ ಪರಿಸರ ಪರಿಸ್ಥಿತಿಯ ಮಂಥನ ಸಭೆಯನ್ನು ಜುಲೈನಲ್ಲಿ ಹೊನ್ನಾವರದಲ್ಲಿ ಆಯೋಜಿಸಲಾಗಿದೆ. ಹಾಸನ ಗೆಂಡೆಕಟ್ಟೆಯಲ್ಲಿ ಜೀವವೈವಿಧ್ಯ ವನ ನಿರ್ಮಾಣಕ್ಕೆ ಮುಂದಾಗಿದ್ದೇವೆ. 5 ಜಿಲ್ಲೆಗಳಲ್ಲಿ ರಕ್ತಚಂದನ, ಶ್ರೀಗಂಧ, ಸೀತಾ ಅಶೋಕ ಸೇರಿದಂತೆ ವಿನಾಶದ ಅಂಚಿನ ಸಸ್ಯಗಳ ವನ ನಿರ್ಮಾಣ, ಪುನಶ್ಚೇತನ ಯೋಜನೆಗೆ ಚಾಲನೆ ನೀಡಲಿದ್ದೇವೆ.
-ಅನಂತ ಹೆಗಡೆ ಅಶೀಸರ,
ಅಧ್ಯಕ್ಷ, ಕರ್ನಾಟಕ ಜೀವ ವೈವಿಧ್ಯ ಮಂಡಳಿ







