ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ರನ್ನು ಭೇಟಿಯಾದ ಕರ್ನಾಟಕ ಬೆಳೆಗಾರರ ಒಕ್ಕೂಟ

ಮಡಿಕೇರಿ, ಜು.2: ಕಾಫಿ ಉದ್ಯಮದ ವಿವಿಧ ಸಮಸ್ಯೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಭೇಟಿ ಮಾಡಿ ಮನವಿ ಸಲ್ಲಿಸಿತು.
ಸಂಸದ ತೇಜಸ್ವಿ ಸೂರ್ಯ, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ , ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ|| ಹೆಚ್.ಟಿ. ಮೋಹನ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಹಾಗೂ ಸಂಘಟನಾ ಕಾರ್ಯದರ್ಶೀ ಕೆ.ಕೆ.ವಿಶ್ವನಾಥ್, ಹಾಗೂ ಕಾಫಿ ಬೆಳೆಗಾರ ಪ್ರದೀಪ್ ಪೂವಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.
ಮನವಿ ಮುಖ್ಯಾಂಶ.
1. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಹೊರಡಿಸಿರುವ, ಕೃಷಿ ಸಾಲದ ಮರುಹೊಂದಾಣಿಕೆಗೆ ಸ್ಪಷ್ಟ ಸೂಚನೆಯಿದ್ದರೂ ಕೂಡ ಹಲವು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಇತರೆ ವಾಣಿಜ್ಯ ಬ್ಯಾಂಕು ಶಾಖೆಗಳು ಬೆಳೆಗಾರರ ಸಾಲದ ಖಾತೆಗಳನ್ನು ಮರುಹೊಂದಾಣಿಕೆ ಮಾಡಲು ಹಿಂಜರಿಯುತ್ತಿವೆ.
2. ಕಾಫಿ ಕೃಷಿ ಸಂಬಂಧಿತ ಸಾಲವನ್ನು ಸರ್ ಫಾಸಿ -2002 ರ ಕಾಯ್ದೆಯಿಂದ ಹೊರಗಿಡಲು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟತೆ ನೀಡಿ ನ್ಯಾಯಾಲಯ ಮತ್ತು ಬ್ಯಾಂಕುಗಳಿಗೆ ನಿರ್ದೇಶನ ನೀಡುವಂತೆ ಕೋರಿಕೆ. ಈ ಕಾಯ್ದೆಯಡಿ ಬಹಳಷ್ಟು ಬೆಳೆಗಾರರಿಗೆ ಬೇಡಿಕೆ ನೋಟಿಸ್” ಹಾಗೂ “ಸ್ವಾಧೀನತೆ ನೋಟಿಸ್” ”ಜಾರಿಯಾಗುತ್ತಾ ಇವೆ. ಇದರಿಂದ ಮುಂದಿನ ದಿನಗಳಲ್ಲಿ ಹಲವು ಕಾಫಿ ಬೆಳೆಗಾರರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಆದುದರಿಂದ ತುರ್ತಾಗಿ ಈ ವಿಷಯದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
3. ಹಾಲಿ ಇರುವ ಬಡ್ಡಿದರದಲ್ಲಿ ಕಾಫಿ ಬೆಳೆ ಹಾಗೂ ಇತರೆ ಕೃಷಿ ಕ್ಷೇತ್ರದ ಸಾಲಗಳನ್ನು ಬೆಳೆಗಾರರು ಮರುಪಾವತಿ ಮಾಡಲು ಸಾಧ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾಫಿ ಮತ್ತು ಇತರೆ ಕೃಷಿಯ ಸಮಗ್ರ ಸಾಲಗಳ ಮೇಲಿನ ಬಡ್ಡಿಯನ್ನು (ಹಾಲಿ ಇರುವ ಹಾಗೂ ಮುಂಬರುವ ಎಲ್ಲಾ ರೀತಿಯ ಸಾಲಗಳ ಮಂಜೂರಾತಿಯಾಗಿ) ಶೇ.3ರಷ್ಟು ನಿಗದಿಪಡಿಸಲು ಕೋರುತ್ತೇವೆ.
4. ಪ್ರಧಾನಮಂತ್ರಿಗಳ ಫಸಲ್ ಭಿಮಾ ಯೋಜನೆಯನ್ನು ಕಾಫಿ ಕೃಷಿಗೂ ಅನ್ವಯಿಸಲು ಕೋರಿದೆ.
5. ಇತ್ತೀಚೆಗೆ ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ನೀಡಿರುವ ಹಣಕಾಸಿನ ಉತ್ತೇಜನ ಮಾದರಿಯಲ್ಲಿ ಕಾಫಿ ಕ್ಷೇತ್ರಕ್ಕೂ ಕೂಡ ಯೋಜನೆ ರೂಪಿಸಬೇಕು. ಕೋವಿಡ್-19 ರ ಲಾಕ್ ಡೌನ್ ನಿಂದಾಗಿ ಕಾಫಿ ಕ್ಷೇತ್ರ ಹಿನ್ನೆಡೆ ಅನುಭವಿಸಿತು. ಕಾಫಿ ಕ್ಷೇತ್ರಕ್ಕೆ ಈವರೆಗೆ ಯಾವುದೇ ಸೌಲಭ್ಯ ದೊರಕಿರುವುದಿಲ್ಲ.
6. ಸಮಗ್ರ ಕೃಷಿ ಕ್ಷೇತ್ರದ ಸಾಲ ನೀಡಿಕೆಯ ವಹಿವಾಟನ್ನು ಸಿಬಿಲ್ ಪರಿಧಿಯಿಂದ ಹೊರಗಿಡಬೇಕೆಂದು ಸಚಿವರನ್ನು ಕೋರಲಾಯಿತು. ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಮನವಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







