ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಬೋಧಕ ಸಿಬ್ಬಂದಿಗೆ ಕಾರ್ಯಾಗಾರ
ಮಂಗಳೂರು, ಜು.2: ಲಕ್ಷೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ (ಎಲ್‌ಎಂಇಟಿ) ಅಂಗ ಸಂಸ್ಥೆಯಾದ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಉನ್ನತ ಶಿಕ್ಷಣದ ಬೋಧಕ ಸಿಬ್ಬಂದಿಗೆ ರಾಷ್ಟ್ರೀಯ ಮಟ್ಟದ ಜ್ಞಾನಾಭಿವೃದ್ಧಿ ಕಾರ್ಯಾಗಾರ ಜರುಗಿತು.
ಎರಡು ದಿನಗಳ ಈ ಕಾರ್ಯಾಗಾರವನ್ನು ಸಂಸ್ಥೆಯ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಶಿಕ್ಷಕ ಕೂಟದ ಸಹಭಾಗಿ ತ್ವದಲ್ಲಿ ‘ಅಂತರ್ಜಾಲ ಅಂತರ್ಗ ಅಧ್ಯಾಪನ’ ಹಾಗೂ ‘ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯ ಪುಷ್ಠೀಕರಣ’ ಎನ್ನುವ ಧ್ಯೇಯವಾಕ್ಯ ದೊಂದಿಗೆ ಆಯೋಜಿಸಲಾಗಿತ್ತು.
ಸಂಸ್ಥೆಯ ನಿರ್ದೇಶಕ ಡಾ.ಟಿ.ಜಯಪ್ರಕಾಶ್ ರಾವ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಕೋವಿಡ್ ದೊಡ್ಡ ಸವಾಲಾಗಿದೆ. ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ಈ ಸವಾಲನ್ನು ಸಮರ್ಥವಾಗಿ ನಿಭಾಯಿಸಿ ಶಿಕ್ಷಣದ ಗುಣಮಟ್ಟವನ್ನು ಹೇಗೆ ಉನ್ನತೀಕರಿಸಬಹುದು ಎನ್ನುವುದನ್ನು ಚರ್ಚಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಲಕ್ಷ್ಮಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ ಹಾಗೂ ನಿರ್ದೇಶಕಿ ಆಶ್ರಿತಾ ಪಿ. ಶೆಟ್ಟಿ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಬೋಧನಾ ವಿಧಾನಗಳ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಡಾ.ಗಣೇಶ್ ಭಟ್ ಎಸ್., ಡಾ.ಸುಪ್ರಭಾ ಕೆ.ಆರ್., ಡಾ.ಅನಂತ್ ಪ್ರಭು ಜಿ. ಮತ್ತು ರಾಗೇಶ್ ರಾಜು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಾಗಾರದಲ್ಲಿ ಸುಮಾರು 24 ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 375 ಬೋಧಕ ಸಿಬ್ಬಂದಿ ಗೂಗಲ್ ಮೀಟ್ ಮತ್ತು ಯೂಟ್ಯೂಬ್ ಮುಖಾಂತರ ಭಾಗವಹಿಸಿದ್ದರು.
ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಪ್ರೊ. ಚೇತನ್ ಕುಮಾರ್, ಪ್ರೊ.ದೀಪಕ್ ರಾವ್, ಪ್ರೊ.ಸ್ವಪ್ನಾ ಶೆಟ್ಟಿ, ಪ್ರೊ. ಮಹೇಶ್ ಪಿ.ಜಿ. ಸಂಪನ್ಮೂಲ ವ್ಯಕ್ತಿಗಳನ್ನು ಶ್ರೋತೃ ಸಭೆಗೆ ಪರಿಚಯಿಸಿದರು. ಸಂಸ್ಥೆಯ ಸಹ ಪ್ರಾಧ್ಯಾಪಕ ಡಾ.ರಾಜೇಶ್ ಎಂ. ವಂದಿಸಿದರು. ಸಂಯೋಜಕಿ ಪ್ರೊ.ದೀಕ್ಷಾ ರಾವ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.







