ಬಸ್ ಪ್ರಯಾಣ ದರ ಏರಿಕೆಗೆ ಸಿಪಿಐಎಂ ಪ್ರಬಲ ವಿರೋಧ
ಮಂಗಳೂರು, ಜು.2: ಕೊರೋನ ಸಂಕಷ್ಟದ ಕಾಲಘಟ್ಟದಲ್ಲೇ ದ.ಕ. ಜಿಲ್ಲೆಯ ಖಾಸಗಿ ಬಸ್ ಪ್ರಯಾಣ ದರವನ್ನು ಬಸ್ ಮಾಲಕರು ಏಕಾಏಕಿ ಏರಿಸಿದೆ. ಇದಕ್ಕೆ ಸಂಪೂರ್ಣ ಒಪ್ಪಿಗೆ ಸೂಚಿಸಿರುವ ದ.ಕ. ಜಿಲ್ಲಾಡಳಿತದ ಕ್ರಮವು ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರವನ್ನು ಏರಿಸಲು ಅವಕಾಶ ನೀಡಬಾರದೆಂದು ದ.ಕ.ಜಿಲ್ಲಾಡಳಿತವನ್ನು ಸಿಪಿಐಎಂ ಒತ್ತಾಯಿಸಿದೆ.
ಕೊರೋನ ಎದುರಿಸುವಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಕೇಂದ್ರ ಸರಕಾರದ ತಪ್ಪು ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಜನತೆಯ ಬದುಕು ಡೋಲಾಯಮಾನವಾಗಿದೆ. ಎಲ್ಲ ವಿಭಾಗದ ದುಡಿಯುವ ವರ್ಗದ ಹಾಗೂ ಮಧ್ಯಮ ವರ್ಗದ ಜನತೆಯ ಸಂಕಷ್ಟಗಳನ್ನು ಹೇಳತೀರದಾಗಿದೆ. ಸಾರಿಗೆ ರಂಗದಲ್ಲಿ ಕನಿಷ್ಠ ಮೂರು ತಿಂಗಳು ತೆರಿಗೆ ವಿನಾಯಿತಿ ನೀಡುವ ಮೂಲಕ ವಾಹನ ಮಾಲಕರಿಗೆ ಹಾಗೂ ಚಾಲಕರ ಬದುಕಿಗೆ ಸ್ಪಂದಿಸಬೇಕಾದ ಸರಕಾರವು ತೀರಾ ಬೇಜವಾಬ್ದಾರಿಯಾಗಿ ವರ್ತಿಸಿದೆ ಎಂದು ಸಿಪಿಐಎಂ ಆಕ್ರೋಶ ವ್ಯಕ್ತಪಡಿಸಿದೆ.
ಕೇರಳ ರಾಜ್ಯ ಸರಕಾರಕ್ಕೆ ತೆರಿಗೆ ವಿನಾಯಿತಿ ನೀಡಲು ಸಾಧ್ಯವಾಗುವುದಾದರೆ, ಕರ್ನಾಟಕದಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಜಿಲ್ಲೆಯ ಖಾಸಗಿ ಬಸ್ ಮಾಲಕರು ತಮ್ಮ ಹೊರೆಯನ್ನು ಸಂಪೂರ್ಣವಾಗಿ ಜನತೆಯ ಮೇಲೆ ಹೊರಿಸುತ್ತಿರುವುದು ಎಷ್ಟು ಸರಿ ? ಕಳೆದ ವರ್ಷವೂ ಇದೇ ಸಂದರ್ಭದ ಲಾಭ ಪಡೆದ ಬಸ್ ಮಾಲಕರು ಏರಿಸಿದ ಬಸ್ ದರವನ್ನು ಇನ್ನೂ ಇಳಿಸಿಲ್ಲ. ಬದಲಾಗಿ ಈ ವರ್ಷವೂ ವಿಪರೀತ ದರ ಏರಿಕೆ ಮಾಡಿರುವುದು,ಅದಕ್ಕೆ ಜಿಲ್ಲಾಡಳಿತವು ಸಾರ್ವಜನಿಕರ ಅಭಿಪ್ರಾಯವನ್ನು ಕೇಳದೆ ಏಕಪಕ್ಷೀಯವಾಗಿ ಸಮ್ಮತಿ ಸೂಚಿಸಿರುವುದು ಜಿಲ್ಲಾಡಳಿತವು ಯಾರ ಪರವಾಗಿದೆ ಎಂದು ಸಾಬೀತಾಗಿದೆ ಎಂದು ಸಿಪಿಐಎಂ ಆಪಾದಿಸಿದೆ.
ಜಿಲ್ಲಾಡಳಿತವು ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕು. ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರವನ್ನು ಏರಿಸಲು ಅವಕಾಶ ನೀಡಬಾರದು. ಇಲ್ಲದಿದ್ದಲ್ಲಿ ತೀವ್ರ ರೀತಿಯ ಪರಿಣಾಮ ಎದುರಿಸಬೇಕಾದೀತು ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹಾಗೂ ದಯಾನಂದ ಶೆಟ್ಟಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.







