ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ನಿಂದ ನಿರ್ಬಂಧಕಾಜ್ಞೆ ಪಡೆದ ಕೇಂದ್ರ ಸಚಿವ ಸದಾನಂದ ಗೌಡ

ಬೆಂಗಳೂರು, ಜು.2: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ತನಿಖೆ ಪ್ರಗತಿಯಲ್ಲಿದ್ದು, ಇದರ ನಡುವೆ ಕೇಂದ್ರ ಸಚಿವ ಸದಾನಂದಗೌಡ ಅವರು ತಮ್ಮ ವಿರುದ್ಧ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ನಗರದ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಪಡೆದಿದ್ದಾರೆ.
ಈ ಮೂಲಕ ಕೇಂದ್ರ ಸಚಿವ ಸದಾನಂದಗೌಡ ಅವರಿಗೂ ಸೀಡಿ ಭೀತಿ ಶುರುವಾಗಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಯಾವುದೇ ನಕಲಿ ಸಿಡಿ ಸೃಷ್ಟಿಸಿ ಬಿಡುಗಡೆ ಮಾಡಿದರೆ, ಇದರಿಂದ ತಮ್ಮ ಚಾರಿತ್ರ್ಯವಧೆಯಾಗಲಿದೆ ಎಂದು ಅರ್ಜಿಯಲ್ಲಿ ಡಿವಿಎಸ್ ಅವರು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲ ತಿಂಗಳುಗಳ ಹಿಂದೆ ಶಾಸಕ ರಮೇಶ್ ಜಾರಕಿಹೊಳಿಯ ಅಶ್ಲೀಲ ಸೀಡಿ ಹೊರಬರುತ್ತಿದ್ದಂತೆ, ಸಚಿವರಾದ ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಭೈರತಿ ಬಸವರಾಜು, ಕೆ. ಸುಧಾಕರ್, ಎಸ್.ಟಿ.ಸೋಮಶೇಖರ್ ಹಾಗೂ ನಾರಾಯಣ ಗೌಡ ಅವರು ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣಿಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು.
ಕೋರ್ಟ್ ಕೂಡ ಅರ್ಜಿಯನ್ನು ಮಾನ್ಯ ಮಾಡಿ ಮಾನಹಾನಿ ವರದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿತ್ತು. ಈ ಬಗ್ಗೆ ರಾಜ್ಯದ ಎಲ್ಲ ಮಾಧ್ಯಮಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿತ್ತು.
ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ ಮುಂಚೆಯೂ ನನ್ನ ವಯಕ್ತಿಕ ತೇಜೋವಧೆಗೆ ಪ್ರಯತ್ನಸಿದ್ದರು.
— Sadananda Gowda (@DVSadanandGowda) July 2, 2021
ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಸಂಪೂರ್ಣ ಗೌರವಿಸುತ್ತೇನೆ. ಆದರೆ ವಿರೋಧಿಗಳ ಸಂಚಿಗೆ ಬಲಿಯಾಗಿ ತಪ್ಪುಮಾಹಿತಿ ಪ್ರಸರಣದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ನಿರ್ಬಂಧ ಆದೇಶ ತರಬೇಕಾಗಿ ಬಂತು. ದಯವಿಟ್ಟು ಯಾರೂ ಅನ್ಯತಾ ಭಾವಿಸಬಾರದು







