ಇಸ್ಲಾಮಾಬಾದ್ : ಭಾರತೀಯ ರಾಯಭಾರ ಕಚೇರಿಯ ಮೇಲೆ ಡ್ರೋನ್ ಹಾರಾಟ
ತನಿಖೆ ನಡೆಸುವಂತೆ ಪಾಕ್ ಗೆ ಭಾರತದ ಆಗ್ರಹ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಜು.2: ಕಳೆದ ವಾರ ಇಸ್ಲಾಮಾಬಾದ್ ನಲ್ಲಿಯ ಭಾರತೀಯ ರಾಯಭಾರ ಕಚೇರಿಯ ಮೇಲೆ ಡ್ರೋನ್ ಹಾರಾಟ ಪತ್ತೆಯಾಗಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ಇಂತಹ ಭದ್ರತಾ ಉಲ್ಲಂಘನೆಗಳ ಪುನರಾವರ್ತನೆಯನ್ನು ತಡೆಯುವಂತೆ ಪಾಕಿಸ್ತಾನಕ್ಕೆ ಸೂಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ತಿಳಿಸಿದೆ.
ಘಟನೆಯ ಕುರಿತು ಭಾರತೀಯ ರಾಯಭಾರ ಕಚೇರಿಯು ಪಾಕಿಸ್ತಾನಕ್ಕೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ಬೆಳವಣಿಗೆಯನ್ನು ಬಲ್ಲ ಮೂಲಗಳು ತಿಳಿಸಿದವು.
ಜೂ.27ರಂದು ಜಮ್ಮು ವಾಯುಪಡೆ ನೆಲೆಯ ಮೇಲೆ ದಾಳಿಯನ್ನು ನಡೆಸಲು ಸ್ಫೋಟಕಗಳು ತುಂಬಿದ್ದ ಡ್ರೋನ್ ಗಳ ಬಳಕೆಯ ಬಳಿಕ ಭಾರತದಲ್ಲಿಯ ಭದ್ರತಾ ವ್ಯವಸ್ಥೆಗಳ ಕುರಿತು ಹೆಚ್ಚುತ್ತಿರುವ ಕಳವಳಗಳ ನಡುವೆ ಈ ಘಟನೆ ಬೆಳಕಿಗೆ ಬಂದಿದೆ.
‘ಜೂ.26ರಂದು ಇಸ್ಲಾಮಾಬಾದ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯ ಆವರಣದ ಮೇಲೆ ಡ್ರೋನ್ ಹಾರಾಟ ಪತ್ತೆಯಾಗಿತ್ತು. ಪಾಕ್ ಸರಕಾರದೊಂದಿಗೆ ಅಧಿಕೃತವಾಗಿ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗಿದೆ. ಪಾಕಿಸ್ತಾನವು ಘಟನೆಯ ಬಗ್ಗೆ ತನಿಖೆ ನಡೆಸುತ್ತದೆ ಮತ್ತು ಇಂತಹ ಭದ್ರತಾ ಉಲ್ಲಂಘನೆಗಳ ಪುನರಾವರ್ತನೆಯನ್ನು ತಡೆಯುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಸುದ್ದಿಗಾರರಿಗೆ ತಿಳಿಸಿದರು.
ರಾಯಭಾರ ಕಚೇರಿಯಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿದ್ದಾಗ ಸಂಕೀರ್ಣದ ಮೇಲೆ ಡ್ರೋನ್ ಕಾಣಿಸಿಕೊಂಡಿತ್ತು ಎಂದು ತಿಳಿದುಬಂದಿದೆ.
ಜಮ್ಮು ವಾಯುನೆಲೆಯ ಮೇಲಿನ ದಾಳಿಯ ಕುರಿತು ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಬಾಗ್ಚಿ,ಆ ಬಗ್ಗೆ ತನಿಖೆ ನಡೆಯುತ್ತಿದೆ ಎಂದಷ್ಟೇ ಹೇಳಿದರು.
ತನ್ಮಧ್ಯೆ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಅವರು, ಜಮ್ಮು ವಾಯುನೆಲೆಯ ಮೇಲಿನ ಡ್ರೋನ್ ದಾಳಿಯು ಪ್ರಮುಖ ಮಿಲಿಟರಿ ಸ್ಥಾವರಗಳನ್ನು ಗುರಿಯಾಗಿಸಿಕೊಳ್ಳುವ ಭಯೋತ್ಪಾದಕ ಕೃತ್ಯವಾಗಿತ್ತು ಎಂದು ಶುಕ್ರವಾರ ಹೇಳಿದ್ದಾರೆ