ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ
![ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ ಕಾರ್ಕಳ: ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಜಾಗೃತಿ ಕಾರ್ಯಕ್ರಮ](https://www.varthabharati.in/sites/default/files/images/articles/2021/07/2/297213-1625245159.jpg)
ಕಾರ್ಕಳ : ರೋಟರಿ ಕ್ಲಬ್ ಮಣಿಪಾಲದ ಮಹಾತ್ವಕಾಂಕ್ಷೆ ಜಾಗತಿಕ ಅನುದಾನ (Global Grant) ಯೋಜನೆಯಾದ "ಸಮುದಾಯ ಮಧುಮೇಹ ತಡೆಗಟ್ಟುವಿಕೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಜಾಗೃತಿ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ 3182ನ ಗವರ್ನರ್ ರೊ| ರಾಜಾರಾಮ್ ಭಟ್ ಅವರು ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಉದ್ಘಾಟಿಸಿದರು.
ಸಮುದಾಯ ಮಧುಮೇಹ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಶಿಬಿರಗಳನ್ನು ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಭಾಗವಾಗಿ 3 ಡಯಾಲಿಸಿಸ್ ಯಂತ್ರಗಳನ್ನು ನೀಡಲಾಯಿತು.
ಈ ಯೋಜನೆಯು ಸುಮಾರು 25 ಲಕ್ಷ ರೂ. ಮೌಲ್ಯದ್ದಾಗಿದೆ. ಸರಳ ಉದ್ಘಾಟನಾ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ 3182 ನ ಚುನಾಯಿತ ಗವರ್ನರ್ ರೊ|ಡಾ ಎಚ್ ಜಯಗೌರಿ, ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷರಾದ ರೊ|ಪ್ರಶಾಂತ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ್ ಶೆಟ್ಟಿ, ರೋಟರಿ ಪೂರ್ವ ಜಿಲ್ಲಾ ಗವರ್ನರ್ ಡಾ ಭರತೇಶ್ ಅಧಿರಾಜ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮೂತ್ರ ಪಿಂಡ ವಿಭಾಗದ ಮುಖ್ಯಸ್ಥರಾದ ಡಾ ಶಂಕರ್ ಪ್ರಸಾದ್ ಮತ್ತು ಪ್ರಾಧ್ಯಾಪಕರಾದ ಡಾ ರವೀಂದ್ರ ಪ್ರಭು, ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಹಾಗೂ ವರ್ಚುವಲ್ ಮೂಲಕ ಅನೇಕ ರೋಟರಿ ಗಣ್ಯರು ಭಾಗವಹಿಸಿದ್ದರು.
ಜು.6ರಿಂದ ಜಾರಿಗೆ ಬರುವಂತೆ ಮೂತ್ರಪಿಂಡ ವಿಭಾಗದ ಹೊರರೋಗಿ ವಿಭಾಗ ಮತ್ತು ಡಯಾಲಿಸಿಸ್ ಸೌಲಭ್ಯವನ್ನು ಆರಂಭಿಸ ಲಾಗುವುದು. ಈ ವಿಭಾಗವು ಪ್ರತೀ ಮಂಗಳವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ರಿಂದ ಸಂಜೆ 5 ರವರಗೆ ಕಾರ್ಯನಿರ್ವಹಿಸಲಿದೆ. ಡಯಾಲಿಸಿಸ್ ಸೌಲಭ್ಯವು ಪ್ರತೀ ದಿನ ದೊರೆಯಲಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ತಿಳಿಸಿದರು.