ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ರಾಜೀನಾಮೆ
ನೂತನ ಸಿಎಂ ಆಯ್ಕೆಗೆ ಶನಿವಾರ ಶಾಸಕಾಂಗ ಸಭೆ

ಹೊಸದಿಲ್ಲಿ: ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ಅಧಿಕಾರ ವಹಿಸಿಕೊಂಡ ಕೇವಲ ನಾಲ್ಕು ತಿಂಗಳ ನಂತರ ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು NDTV ಶುಕ್ರವಾರ ವರದಿ ಮಾಡಿದೆ.
ಕಳೆದ ಮೂರು ದಿನಗಳಿಂದ ಬಿಜೆಪಿ ನಾಯಕತ್ವದೊಂದಿಗೆ ಸಭೆ ನಡೆಸಲು ದಿಲ್ಲಿಯಲ್ಲಿದ್ದ ತಿರಥ್ ರಾವತ್ ಅವರಿಗೆ ಸಿಎಂ ಸ್ಥಾನ ತ್ಯಜಿಸುವಂತೆ ಇಂದು ಮಧ್ಯಾಹ್ನ ಆಡಳಿತ ಪಕ್ಷ ಕೇಳಿಕೊಂಡಿದೆ. ಇದಾದ ನಂತರ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರೊಂದಿಗೆ ಭೇಟಿಗೆ ಸಮಯ ಕೋರಿದ್ದರು. ಆದರೆ ರಾಜ್ಯಪಾಲರನ್ನು ಭೇಟಿಯಾಗುವ ಮೊದಲು ಅವರು ತಮ್ಮ ರಾಜೀನಾಮೆ ಪತ್ರವನ್ನು ತಮ್ಮ ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಅವರಿಗೆ ನೀಡಿದರು.
ಉತ್ತರಾಖಂಡದ ಬಿಜೆಪಿ ಶಾಸಕರು ನಾಳೆ ಸಭೆ ಸೇರಿ ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.
ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ವಿರುದ್ಧ ತೀವ್ರ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ತಿರಥ್ ರಾವತ್ ಅವರು ಮಾರ್ಚ್ ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಆದರೆ ಈ ಹುದ್ದೆಯನ್ನು ಉಳಿಸಿಕೊಳ್ಳಲು ಸಂಸದರಾಗಿರುವ ರಾವತ್ ಅವರು ಸೆಪ್ಟೆಂಬರ್ 10 ರೊಳಗೆ ವಿಧಾನಸಭಾ ಸ್ಥಾನವನ್ನು ಗೆದ್ದು ಉತ್ತರಾಖಂಡ ಶಾಸಕಾಂಗ ಸಭೆಯ ಸದಸ್ಯರಾಗಬೇಕಿತ್ತು.
ಆದರೆ ಚುನಾವಣಾ ಆಯೋಗ ರಾಜ್ಯದಲ್ಲಿ ತೆರವಾಗಿರುವ ಎರಡು ಸ್ಥಾನಗಳಿಗೆ ಕೋವಿಡ್-19 ಕಾರಣಕ್ಕೆ ಉಪ ಚುನಾವಣೆ ನಡೆಸುವ ಸಾಧ್ಯತೆಗಳು ಕಡಿಮೆ ಯಾಗಿರುವುದರಿಂದ ನಾಯಕತ್ವ ಬದಲಾವಣೆ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಉತ್ತರಾಖಂಡದ ಗಂಗೋತ್ರಿ ಹಾಗೂ ಹಲ್ದವಾನಿ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಾಗಿತ್ತು.







