ಗರ್ಭಿಣಿಯರಿಗೆ ಕೋವಿಡ್ ಲಸಿಕೆ: ಆರೋಗ್ಯ ಸಚಿವಾಲಯ ಅನುಮತಿ

ಹೊಸದಿಲ್ಲಿ, ಜು.2: ಕೊರೋನ ವೈರಸ್ ಸೋಂಕಿನ ವಿರುದ್ಧ ಲಸಿಕೆ ನೀಡಿಕೆ ಅಭಿಯಾನವನ್ನು ಶುಕ್ರವಾರ ಕೇಂದ್ರ ಸರಕಾರವು ಗರ್ಭಿಣಿಯರಿಗೂ ವಿಸ್ತರಿಸಿದೆ. ಗರ್ಭಿಣಿಯರು ಇನ್ನು ಮುಂದೆ ಲಸಿಕೆಯನ್ನು ಪಡೆಯಲು ಸರಕಾರದ ಕೋವಿನ್ ವೆಬ್ಸೈಟ್ ಪೋರ್ಟಲ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಆರೋಗ್ಯ ಸಚಿವಾಲಯ ಪ್ರಕಟಣೆಯೊಂದರಲ್ಲಿ ತಿಳಿಸಿದೆ.
ಗರ್ಭಿಣಿಯರಿಗೂ ಕೊರೋನ ಸೋಂಕಿನ ಲಸಿಕೆಯನ್ನು ನೀಡಬಹುದೆಂದು ಲಸಿಕೀಕರಣಕ್ಕಾಗಿನ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್ಟಿಎಜಿಐ)ಯ ಶಿಫಾರಸು ಮಾಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾ ಲಯದ ಜಂಟಿ ಕಾರ್ಯದರ್ಶಿ ಲವ ಆಗರ್ವಾಲ್ ಇತ್ತೀಚೆಗೆ ತಿಳಿಸಿದ್ದರು.
ಈ ಮಧ್ಯೆ ದೇಶಾದ್ಯಂತ ಕೋವಿಡ್-19 ಲಸಿಕೆಯ ಡೋಸ್ ಗಳನ್ನು ಪಡೆದವರ ಸಂಖ್ಯೆ ಶುಕ್ರವಾರ 34 ಕೋಟಿ ದಾಟಿರುವುದಾಗಿ ಕೇಂದ್ರ ಸರಕಾರ ತಿಳಿಸಿದೆ. ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 18ರಿಂದ 44ರ ವಯೋಮಾನದೊಳಗಿನ ಒಟ್ಟು 9,41,03,985 ಮಂದಿ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಹಾಗೂ 22,73,477 ಮಂದಿ ಎರಡನೆ ಡೋಸ್ ಪಡೆದಿರುವುದಾಗಿ ಆರೋಗ್ಯ ಸಚಿವಾಲಯದ ದೈನಂದಿನ ಬುಲೆಟಿನ್ ತಿಳಿಸಿದೆ.





