ಅತ್ಯಾಚಾರ ಪ್ರಕರಣದ ತೀರ್ಪಿನಲ್ಲಿ ದೂರುದಾರಳ ಹೆಸರು ಉಲ್ಲೇಖ: ಸುಪ್ರೀಂ ಕೋರ್ಟ್ ಆಕ್ಷೇಪ

ಹೊಸದಿಲ್ಲಿ, ಜು.2:ಅತ್ಯಾಚಾರ ಪ್ರಕರಣವೊಂದರಲ್ಲಿ ಸೆಶನ್ಸ್ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ ದೂರುದಾರಳ ಹೆಸರನ್ನು ಪ್ರಸ್ತಾವಿಸಿದ್ದಕ್ಕಾಗಿ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ನಿರ್ವಹಿಸುವಾಗ ಅಧೀನ ನ್ಯಾಯಾಲಯಗಳು ಜಾಗರೂಕತೆಯಿಂದ ವರ್ತಿಸಬೇಕೆಂದು ನ್ಯಾಯಾಲಯ ಸೂಚನೆ ನೀಡಿದೆ.
ತನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ಸೆಶನ್ಸ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅತ್ಯಾಚಾರ ಆರೋಪಿಯೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ವಿನೀತ್ ಶರಣ್ ಹಾಗೂ ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಸೆಶನ್ಸ್ ನ್ಯಾಯಾಲಯದ ತೀರ್ಪನ್ನು ಚತ್ತೀಸ್ಗಢ ಹೈಕೋರ್ಟ್ ಎತ್ತಿಹಿಡಿದ ಬಳಿಕ, ಅತ್ಯಾಚಾರ ಆರೋಪಿಯು ಸುಪ್ರೀಂಕೋರ್ಟ್ ನ ಮೆಟ್ಟಲೇರಿದ್ದ. ಆದಾಗ್ಯೂ ಸುಪ್ರೀಂಕೋರ್ಟ್ ಕೂಡಾ ಆತನ ಅರ್ಜಿಯನ್ನು ತಿರಸ್ಕರಿಸಿದೆ.
ಈ ಹಿಂದೆ ತೆಹೆಲ್ಕಾ ಪತ್ರಿಕೆಯ ಸಂಪಾದಕ ತರುಣ್ ತೇಜ್ಪಾಲ್ ವಿರುದ್ಧ ಹೊರಿಸಲಾಗಿದ್ದ ಲೈಂಗಿಕ ಕಿರುಕುಳದ ಪ್ರಕರಣದಲ್ಲಿಯೂ ಸಂತ್ರಸ್ತ ಮಹಿಳೆಯ ಗುರುತನ್ನು ಬಹಿರಂಗಪಡಿಸುವಂತಹ ಎಲ್ಲಾ ಪ್ರಸ್ತಾವನೆಗಳನ್ನು ತೆಗೆದುಹಾಕಬೇಕೆಂದು ಬಾಂಬೆ ಹೈಕೋರ್ಟ್ ಸೆಶನ್ಸ್ ನ್ಯಾಯಾಲಯಕ್ಕೆ ಆದೇಶವೊಂದರಲ್ಲಿ ತಿಳಿಸಿರುವುದಾಗಿ ಲೈವ್ ಲಾ ತನ್ನ ವರದಿಯಲ್ಲಿ ಹೇಳಿದೆ.
2018ರ ಜನವರಿಯಲ್ಲಿ ಜಮ್ಮುಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶವೊಂದರಲ್ಲಿ ಸಂತ್ರಸ್ತೆಯ ಹೆಸರನ್ನು ಆಕೆಯ ಸಾವಿನ ಬಳಿಕವೂ ಪ್ರಕರಣದಲ್ಲಿ ಉಲ್ಲೇಖಿಸಕೂಡದೆಂದು ಸ್ಪಷ್ಟವಾಗಿ ತಿಳಿಸಿರುವುದನ್ನು ಇಲ್ಲಿ ನೆನಪಿಸಬಹುದಾಗಿದೆ ಎಂದು ಲೈವ್ ಲಾ ವರದಿ ಹೇಳಿದೆ.







