ಬ್ಯಾಂಕ್ ವಂಚನೆ ಹಗರಣ: ನಟ ಡಿನೋ ಮೊರಿಯಾ ಅಸ್ತಿ ಮುಟ್ಟುಗೋಲು

Photo : facebook/thedinomorea/
ಹೊಸದಿಲ್ಲಿ, ಜು.2: ಗುಜರಾತ್ ಮೂಲದ ಉದ್ಯಮಿಗಳಾದ ಸಂದೇಸಾರ ಸಹೋದರರು ಶಾಮೀಲಾಗಿರುವ 14,500 ಕೋಟಿ ರೂ. ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಾಲಿವುಡ್ ನಟ ಡಿನೊ ಮೊರಿಯಾ ಹಾಗೂ ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಅಳಿಯ ಇರ್ಫಾನ್ ಸಿದ್ದೀಕಿ ಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಮುಟ್ಟುಗೋಲು ಹಾಕಿದೆ.
ಈ ಹಗರಣದಲ್ಲಿ ಸಂದೇಸಾರಾ ಬ್ರದರ್ಸ್ ಹಾಗೂ ಇರ್ಫಾನ್ ಸಿದ್ದಿಕಿ ಮತ್ತು ಡಿನೋ ಮೊರಿಯಾ ನಡುವೆ ದೊಡ್ಡ ಮೊತ್ತದ ಕಪ್ಪುಹಣ ಬಿಳುಪುಗೊಳಿಸಿದ ಅವ್ಯವಹಾರ ನಡೆದಿರುವುದನ್ನು ಪತ್ತೆಹಚಿರುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ.
ಇದೊಂದು ಅರ್ಥಿಕ ಅಪರಾಧದ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ನಡೆದಿದೆಯೆನ್ನಲಾದ ಅಕ್ರಮ ವಹಿವಾಟಿನ ಮೌಲ್ಯಕ್ಕೆ ಸರಿಸಮಾನವಾದ ಇರ್ಫಾನ್ ಸಿದ್ದೀಕಿ ಅವರ 2.41 ಕೋಟಿ ರೂ. ಹಾಗೂ ಡಿನೊ ಮೊರಿಯಾ ಅವರ 1.4 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆಯೆಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
ಸ್ಟರ್ಲಿಂಗ್ ಬಯೋಟೆಕ್ ಹಾಗೂ ಆ ಸಂಸ್ಥೆಯ ಮುಖ್ಯ ಪ್ರವರ್ತಕರು ಮತ್ತು ನಿರ್ದೇಶಕರಾದ ನಿತಿನ್ ಜಯಂತಿಲಾಲ್ ಸಂದೇಸಾರ, ಚೇತನ್ ಕುಮಾರ್ ಜಯಂತಿ ಲಾಲ್ ಸಂದೇಸಾರ ಹಾಗೂ ದೀಪ್ತಿ ಸಂದೇಸಾರ 14,500 ಕೋಟಿ ರೂ. ಬ್ಯಾಂಕ್ ವಂಚನೆ ಹಗರಣದಲ್ಲಿ ಆರೋಪಿಗಳಾಗಿದ್ದು, ಈಗ ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ನಿತಿನ್ ಹಾಗೂ ಚೇತನ್ ಕುಮಾರ್ ಸಹೋದರರು 2017ರಲ್ಲಿಯೇ ಇತರ ಆರೋಪಿಗಳ ಜೊತೆ ಭಾರತದಿಂದ ಪರಾರಿಯಾಗಿದ್ದರು.
ಉನ್ನತ ಮಟ್ಟದ ರಾಜಕಾರಣಿಗಳ ಮೇಲೆ ಪ್ರಭಾವ ಬೀರಿದ ಹಾಗೂ ಭ್ರಷ್ಟಾಚಾರ ಮತ್ತು ತೆರಿಗೆಗಳಳತನದ ಆರೋಪಗಳಿಗೆ ಸಂಬಂಧಿಸಿ ಸಂದೇಸಾರ ಸಹೋದರರು ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಯಿಂದ ಪ್ರತ್ಯೇಕ ತನಿಖೆಗಳನ್ನು ಎದುರಿಸುತ್ತಿದ್ದಾರೆ.







