ಬಿಹಾರದಲ್ಲಿ ವರ್ಗಾವಣೆ ಹಗರಣದಲ್ಲಿ 100 ಕೋಟಿ ಗಳಿಸಿದ ಬಿಜೆಪಿ ಸಚಿವರು: ಸ್ವಪಕ್ಷೀಯ ಶಾಸಕರಿಂದ ಆರೋಪ

ಪಾಟ್ನ, ಜು.2: ಬಿಹಾರದಲ್ಲಿ ವರ್ಗಾವಣೆ ಮತ್ತು ಪೋಸ್ಟಿಂಗ್ ಹಗರಣ ನಡೆದಿದೆ ಎಂದು ಆಡಳಿತಾರೂಢ ಮೈತ್ರಿಕೂಟದ ಬಿಜೆಪಿ ಶಾಸಕರೇ ಆರೋಪ ಮಾಡುವ ಮೂಲಕ ಸರಕಾರಕ್ಕೆ ಮುಜುಗುರ ತಂದಿಟ್ಟಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿರುವ ಬಿಜೆಪಿ ಸಚಿವರು ಈ ಅಕ್ರಮ ಹಗರಣದಿಂದ ಸುಮಾರು 100 ಕೋಟಿ ರೂ. ಸಂಗ್ರಹಿಸಿದ್ದಾರೆ ಎಂದು ಬಿಜೆಪಿ ಶಾಸಕ ಗ್ಯಾನೇಂದ್ರ ಸಿಂಗ್ ಗ್ಯಾನು ಆರೋಪಿಸಿದ್ದಾರೆ. ಈ ಮಧ್ಯೆ, ತನ್ನ ಇಲಾಖೆಯ ಅಧಿಕಾರಿಯನ್ನು ವರ್ಗಾಯಿಸುವುದಕ್ಕೆ ಸರಕಾರದ ಪ್ರಧಾನ ಕಾರ್ಯದರ್ಶಿ ಅತುಲ್ ಪ್ರಸಾದ್ ಅಡ್ಡಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಾಮಾಜಿಕ ನ್ಯಾಯ ಇಲಾಖೆಯ ಸಚಿವ ಮದನ್ ಸಾಹ್ನಿ(ಜೆಡಿಯು) ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.
ರಾಜ್ಯದ ವಿವಿಧ ಇಲಾಖೆಯ ಸುಮಾರು 2000 ಉದ್ಯೋಗಿಗಳು ಜೂನ್ 23ರಿಂದ 30ರ ಅವಧಿಯಲ್ಲಿ ವರ್ಗಾವಣೆಗೊಂಡಿದ್ದಾರೆ. ಆದರೆ ತನ್ನ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಪ್ರಸಾದ್ ಅಡ್ಡಗಾಲಿಟ್ಟಿದ್ದಾರೆ ಎಂದು ಸಾಹ್ನಿ ಕಿಡಿಕಾರಿದ್ದಾರೆ. ಸಿಬ್ಬಂದಿಗಳ ವರ್ಗಾವಣೆಗೆ ಜೂನ್ 30 ಅಂತಿಮ ದಿನವಾಗಿದೆ. ಆ ಬಳಿಕ ವರ್ಗಾವಣೆಯಾಗಬೇಕಿದ್ದರೆ ಮುಖ್ಯಮಂತ್ರಿಯ ಅನುಮೋದನೆ ಪಡೆಯಬೇಕು. ಈ ವರ್ಗಾವಣೆ ಪ್ರಕ್ರಿಯೆ ಕೋಟಿಗಟ್ಟಲೆ ಲಂಚದ ಹಗರಣವಾಗಿದೆ.
ಬಿಜೆಪಿ ಸಚಿವರು ಸುಮಾರು 100 ಕೋಟಿ ಗಳಿಸಿದ್ದರೆ ಜೆಡಿಯು ಸಚಿವರೂ ಹಲವು ಕೋಟಿ ಗಳಿಸಿದ್ದಾರೆ. 4 ಲಕ್ಷದಿಂದ 50 ಲಕ್ಷದವರೆಗೆ ವಸೂಲು ಮಾಡಲಾಗಿದ್ದು ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನೂ ಗಾಳಿಗೆ ತೂರಲಾಗಿದ್ದು ಇದಕ್ಕೆ ಮುಖ್ಯಮಂತ್ರಿ ತಡೆಯಾಜ್ಞೆ ನೀಡಬೇಕು ಎಂದು ಬಿಜೆಪಿ ಶಾಸಕ ಗ್ಯಾನೇಂದ್ರ ಸಿಂಗ್ ಹೇಳಿರುವುದಾಗಿ ವರದಿಯಾಗಿದೆ.
ಲಂಚ ನೀಡಿದವರನ್ನು ಮಾತ್ರ ವರ್ಗಾವಣೆಗೆ ಪರಿಗಣಿಸಲಾಗಿದೆ. ತಮಗೆ ಇಷ್ಟ ಬಂದ ಹುದ್ದೆಗೆ ಸೇರಿಕೊಳ್ಳಲು ಅಥವಾ ತಮ್ಮಿಷ್ಟದ ಊರಿಗೆ ವರ್ಗಾವಣೆಗೊಳ್ಳಲು ಸಚಿವರಿಗೆ ಲಂಚ ನೀಡುವ ಅಧಿಕಾರಿಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಮತ್ತೊಬ್ಬ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಪ್ರಶ್ನಿಸಿದ್ದಾರೆ. ರಾಜ್ಯ ಸರಕಾರ ಅಧಿಕಾರಿಗಳ ವರ್ಗಾವಣೆಯನ್ನೂ ಒಂದು ದಂಧೆಯನ್ನಾಗಿಸಿದೆ ಎಂದು ವಿಪಕ್ಷ ಆರ್ಜೆಡಿ ಟೀಕಿಸಿದೆ. ಈ ಮಧ್ಯೆ, ಅಧಿಕಾರಿಗಳ ವರ್ಗಾವಣೆ ಕುರಿತು ಅಧಿಸೂಚನೆ ಹೊರಬಿದ್ದ 24 ಗಂಟೆಯೊಳಗೆ, ಇದನ್ನು ತಡೆಹಿಡಿದಿರುವುದಾಗಿ ರಾಜ್ಯ ಸರಕಾರ ಪ್ರಕಟಿಸಿದೆ.







