ಗೌರಿ ಲಂಕೇಶ್ ಪ್ರಕರಣ: ಹಿಂದಿನ ಆದೇಶದ ಪ್ರಭಾವಕ್ಕೊಳಗಾಗದೆ ಆರೋಪಿಯ ಜಾಮೀನು ಅರ್ಜಿ ಕುರಿತು ನಿರ್ಧರಿಸಿ ಎಂದ ಸುಪ್ರೀಂ

ಹೊಸದಿಲ್ಲಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲೊಬ್ಬಾತನ ಜಾಮೀನು ಅರ್ಜಿ ಕುರಿತು ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಆರೋಪಿ ಮೋಹನ್ ನಾಯಕ್ ಎಂಬಾತನ ವಿರುದ್ಧ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯಡಿ ಆರೋಪಗಳನ್ನು ಕೈಬಿಟ್ಟಿದ್ದನ್ನು ಪ್ರಶ್ನಿಸಿ ಗೌರಿ ಅವರ ಸೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿದ್ದ ಅಪೀಲಿನ ಕುರಿತಂತೆ ಕರ್ನಾಟಕ ಸರಕಾರದ ಪ್ರತಿಕ್ರಿಯೆಯನ್ನೂ ಕೇಳಿ ಜಸ್ಟಿಸ್ ಎ ಎಂ ಖನ್ವಿಲ್ಕರ್ ಅವರ ನೇತೃತ್ವದ ತ್ರಿಸದಸ್ಯ ಪೀಠವು ಕರ್ನಾಟಕ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ಹೈಕೋರ್ಟ್ ಎಪ್ರಿಲ್ 22 ರಂದು ನಾಯಕ್ ವಿರುದ್ಧದ ಅಪರಾಧಗಳ ನಿಯಂತ್ರಣ ಕಾಯಿದೆಯಡಿ ಆರೋಪಗಳನ್ನು ಕೈಬಿಟ್ಟು ಜಾಮೀನು ಅರ್ಜಿ ಸಲ್ಲಿಸಲು ಹೇಳಿದ್ದನ್ನು ಆಧರಿಸಿ ಆತ ಜಾಮೀನು ಕೇಳುತ್ತಿದ್ದಾನೆ ಎಂದು ಗೌರಿ ಸೋದರಿ ಕವಿತಾ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಈಗ ಆ ಆದೇಶದ ಪ್ರಭಾವಕ್ಕೆ ಒಳಗಾಗದೆ ಆತನ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿ ತೀರ್ಪು ನೀಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 15ಕ್ಕೆ ನಿಗದಿ ಪಡಿಸಿದೆ.







