ಕಪಿಲ್ ಮಿಶ್ರಾ ಪ್ರಚೋದನಾತ್ಮಕ ಭಾಷಣದ ವೇಳೆ ಜೊತೆಗಿದ್ದ ಡಿಸಿಪಿಯಿಂದ ರಾಷ್ಟ್ರಪತಿಗಳ ಶೌರ್ಯ ಪದಕಕ್ಕೆ ಅರ್ಜಿ

Photo: indianexpress
ಹೊಸದಿಲ್ಲಿ: ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕಕ್ಕಾಗಿ ಅರ್ಜಿ ಸಲ್ಲಿಸಿರುವ ದಿಲ್ಲಿ ಪೊಲೀಸ್ ಅಧಿಕಾರಿಗಳ ಪೈಕಿ ಈಶಾನ್ಯ ದಿಲ್ಲಿಯ ಮಾಜಿ ಡಿಸಿಪಿ ವೇದ್ ಪ್ರಕಾಶ್ ಸೂರ್ಯ ಕೂಡ ಸೇರಿದ್ದಾರೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿ ಹಿಂಸಾಚಾರ ಭುಗಿಲೇಳುವ ಮುನ್ನ ಫೆಬ್ರವರಿ 23ರಂದು ಸಿಎಎ ಪರ ರ್ಯಾಲಿಯೊಂದರಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಪ್ರಚೋದನಕಾರಿ ಭಾಷಣ ನೀಡಿದ ಸಂದರ್ಭ ಅವರ ಪಕ್ಕದಲ್ಲಿಯೇ ವೇದ್ ಪ್ರಕಾಶ್ ನಿಂತುಕೊಂಡಿದ್ದ ಫೋಟೋ ಭಾರೀ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಹಿಂಸಾಚಾರದ ವೇಳೆ ತಮ್ಮ ʼಅಸಾಧಾರಣ' ಕಾರ್ಯದಿಂದಾಗಿ ನೂರಾರು ಜನರ ಪ್ರಾಣ ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸಿದ್ದೇನೆ ಎಂಬ ವಿವರಣೆಯೊಂದಿಗೆ ವೇದ್ ಪ್ರಕಾಶ್ ಸೂರ್ಯ ಅವರು ಶೌರ್ಯ ಪದಕಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವೇದ್ ಪ್ರಕಾಶ್ ಹೊರತಾಗಿ ಜೆಸಿಪಿ ಅಲೋಕ್ ಕುಮಾರ್ ಮತ್ತು ಸುಮಾರು 25 ಪೊಲೀಸ್ ಅಧಿಕಾರಿಗಳು ಶೌರ್ಯ ಪದಕಕ್ಕೆ ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದ್ದು ಹೆಚ್ಚಿನವರು ಹಿಂಸಾಚಾರದ ವೇಳೆ ತಾವು ಸಲ್ಲಿಸಿದ್ದ ಕರ್ತವ್ಯವನ್ನು ಮುಂದಿಟ್ಟಿದ್ದಾರೆ.
ಮೂಲಗಳ ಪ್ರಕಾರ ಸೂರ್ಯ ಅವರು ಕೆಲ ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿಯನ್ನು ಪೊಲೀಸ್ ಮುಖ್ಯ ಕಾರ್ಯಾಲಯಕ್ಕೆ ಇತರ 24 ಅಧಿಕಾರಿಗಳ ಅರ್ಜಿಗಳೊಂದಿಗೆ ಕಳುಹಿಸಲಾಗಿದೆ.
ಹಿಂಸಾಚಾರವನ್ನು ಮೂರ್ನಾಲ್ಕು ದಿನಗಳಲ್ಲಿ ನಿಯಂತ್ರಿಸಿದ್ದಾಗಿ ಹಾಗೂ ಸಾಹಸಮಯ ಪ್ರಯತ್ನಗಳಿಂದ ನೂರಾರು ಜೀವಗಳನ್ನು ಉಳಿಸಿದ್ದಾಗಿ ಹಾಗೂ ಸಹಾಯಕ್ಕಾಗಿ ಬಂದ ಫೋನ್ ಕರೆಗಳಿಗೆ ಸ್ಪಂದಿಸಿದ್ದಾಗಿ ಮತ್ತು ಕಲ್ಲು ತೂರಾಟಗಳ ನಡುವೆಯೂ ಕರ್ತವ್ಯ ನಿರ್ವಹಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ವೇದ್ ಪ್ರಕಾಶ್ ಅವರು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಪಕ್ಕದಲ್ಲಿಯೇ ನಿಂತುಕೊಂಡಿದ್ದ ದಿನದ ವೀಡಿಯೋದಲ್ಲಿ ಮಿಶ್ರಾ ಅವರು ತಮ್ಮ ಭಾಷಣದಲ್ಲಿ "ಡಿಸಿಪಿ ನಮ್ಮ ಮುಂದೆ ನಿಂತಿದ್ದಾರೆ ಹಾಗೂ ಅಮೆರಿಕಾ ಅಧ್ಯಕ್ಷರು(ಟ್ರಂಪ್) ಭಾರತದಲ್ಲಿರುವ ತನಕ ನಾವು ಈ ಪ್ರದೇಶವನ್ನು ಶಾಂತಿಯುತವಾಗಿ ತೊರೆಯುತ್ತೇವೆ ಎಂದು ನಿಮ್ಮ ಪರವಾಗಿ ಅವರಿಗೆ ಹೇಳುತ್ತಿದ್ದೇನೆ. ಆದರೆ ನಂತರ ಸಿಎಎ ಪ್ರತಿಭಟನಾಕಾರರು ರಸ್ತೆಗಳನ್ನು ತೆರವುಗೊಳಿಸದೇ ಇದ್ದರೆ ನಾವು ನಿಮ್ಮ (ಪೊಲೀಸರ) ಮಾತುಗಳನ್ನು ಕೇಳುವುದಿಲ್ಲ. ನಾವು ಬೀದಿಗಿಳಿಬೇಕಾಗುತ್ತದೆ" ಎಂದಿದ್ದರು.
ಈ ವರ್ಷದ ಫೆಬ್ರವರಿಯಲ್ಲಿ ವೇದ್ ಪ್ರಕಾಶ್ ಆವರನ್ನು ಈಶಾನ್ಯ ಡಿಸಿಪಿ ಹುದ್ದೆಯಿಂದ ರಾಷ್ಟ್ರಪತಿ ಭವನದ ಡಿಸಿಪಿಯನ್ನಾಗಿ ವರ್ಗಾಯಿಸಲಾಗಿತ್ತು.







