ಖಾಸಗಿ ಬಸ್ ಪ್ರಯಾಣ ದರ ಏರಿಕೆ ಹಿನ್ನಲೆ: ಸಾರಿಗೆ ಪ್ರಾಧಿಕಾರದ ಸಭೆ ಕರೆಯಲು ಡಿವೈಎಫ್‌ಐ ಮನವಿ

ಮಂಗಳೂರು, ಜು.3: ಲಾಕ್‌ಡೌನ್ ನಿಯಮಗಳು ಸಡಿಲಗೊಳ್ಳುತ್ತಿರುವಂತೆಯೇ ಸಂಚಾರ ಆರಂಭಿಸಿರುವ ಅವಿಭಜಿತ ದ.ಕ. ಜಿಲ್ಲೆಯ ಖಾಸಗಿ ಬಸ್ಸುಗಳ ಮಾಲಕರ ಸಂಘಟನೆಗಳು ಶೇ.25 ರಷ್ಟು ಪ್ರಯಾಣ ದರವನ್ನು ಏಕಪಕ್ಷೀಯವಾಗಿ ಏರಿಕೆ ಮಾಡಿರು ವುದನ್ನು ಮತ್ತು ದರ ಏರಿಕೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯದೆ ಒಪ್ಪಿಗೆ ನೀಡಿರುವುದನ್ನು ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ಕೊರೋನ ನಿರ್ಬಂಧ, ಸತತ ಲಾಕ್‌ಡೌನ್‌ಗಳಿಂದ ಖಾಸಗಿ ಬಸ್ ಮಾಲಕರು ಮಾತ್ರವಲ್ಲದೆ ಜನಸಾಮಾನ್ಯರೂ ಕೂಡ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವವರು ಬಹುತೇಕ ಬಡ ವರ್ಗಕ್ಕೆ ಸೇರಿದ್ದಾರೆ. ಕೂಲಿಕಾರರು, ಸಣ್ಣ ಪುಟ್ಟ ಅಂಗಡಿಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವವರು ಕಡಿಮೆ ಸಂಬಳ ಪಡೆಯುವವರಾಗಿದ್ದು, ಬಸ್ ಪ್ರಯಾಣ ದರ ಏರಿಕೆ ಯಿಂದ ಸಮಸ್ಯೆಗೊಳಗಾಗಿದ್ದಾರೆ.
ಖಾಸಗಿ ಬಸ್ ಮಾಲಕರು ಕೊರೋನ, ಲಾಕ್‌ಡೌನ್ ನಿರ್ಬಂಧ, ಡೀಸೆಲ್ ಬೆಲೆ ಏರಿಕೆ, ಶೇ. 50 ಪ್ರಯಾಣಿಕರಿಗೆ ಮಾತ್ರ ಅವಕಾಶಗಳ ಸಹಿತ ಮತ್ತಿತರ ಕಾರಣಗಳನ್ನು ಮುಂದಿಟ್ಟು ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯನ್ನೂ ನಡೆಸದೆ ಸಾರ್ವಜನಿಕರ ಅಹವಾಲು ಪಡೆಯದೆ ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ಕೂಡ ವೌನ ಸಮ್ಮತಿ ನೀಡಿರುವುದು ಖಂಡನೀಯ. ಹಾಗಾಗಿ ಪ್ರಯಾಣ ದರಗಳ ಕಾಲಮಿತಿ ಮತ್ತು ಅವುಗಳ ಕಾನೂನುಬದ್ಧ ವ್ಯವಸ್ಥೆಗಳ ಕುರಿತು ಚರ್ಚಿಸಲು ತಕ್ಷಣ ಜಿಲ್ಲಾಡಳಿತ ಸಾರಿಗೆ ಪ್ರಾಧಿಕಾರದ ಸಭೆ ಕರೆಯಬೇಕು. ಸಾರ್ವಜನಿಕರ ಅಭಿಪ್ರಾಯ, ನಿಯಮಗಳ ಆಧಾರದಲ್ಲಿ ಬಸ್ ಮಾಲಕರ ಸಮಸ್ಯೆ ಹಾಗೂ ದರ ಏರಿಕೆಗೆ ಸಂಬಂಧಿಸಿ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಮತ್ತು ಕಾರ್ಯದರ್ಶಿ ಸಂತೋಷ್ ಬಜಾಲ್ ನೇತೃತ್ವದ ನಿಯೋಗ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಮನವಿ ಸಲ್ಲಿಸಿದೆ.







