ಕೋವಿಡ್ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು, ಜು.3: ಕೊರೋನ ಮಾರ್ಗಸೂಚಿಗಳ ಬಗ್ಗೆ ನಿರ್ಲಕ್ಷ್ಯ ತೋರುವ ಸಾರ್ವಜನಿಕರ ಮೇಲೆ ಪಾಲಿಕೆಯ ಮಾರ್ಷಲ್‍ಗಳು ಹಾಗೂ ಪೊಲೀಸರು ಕಟ್ಟುನಿಟ್ಟಿನ ದಂಡ ವಿಧಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನೆ ನೀಡಿದರು.
ಶನಿವಾರ ನಗರದ ಪುರಭವನ ಸಭಾಂಗಣದಲ್ಲಿ ಕೋವಿಡ್ ನಿಯಮ ಪಾಲನೆ ಕುರಿತು ಪೊಲೀಸರೊಂದಿಗೆ ಹಮ್ಮಿಕೊಂಡಿದ್ದ ಸಮನ್ವಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೂ, ಪಾಲಿಕೆಯ ಮಾರ್ಷಲ್‍ಗಳು ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕೋವಿಡ್ ನಿಯಮಗಳನ್ನು ಪಾಲನೆ ಮಾಡದಿರುವವರಿಗೆ ದಂಡ ವಿಧಿಸಬೇಕೆಂದರು.
ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ. ಜೊತೆಗೆ ಆಗಿಂದಾಗ್ಗೆ ಕೈಗಳನ್ನು ತೊಳೆಯುತ್ತಿರಬೇಕು. ಇದನ್ನು ಕಡ್ಡಾಯವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಪಾಲಿಕೆಯ ಮಾರ್ಷಲ್‍ಗಳು ಹಾಗೂ ಪೊಲೀಸ್ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಅವರು ಹೇಳಿದರು.
ಇನ್ನು, ಮಾರ್ಷಲ್‍ಗಳು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವವರಿಗೆ ದಂಡ ವಿಧಿಸುವ ವೇಳೆ ವಾಗ್ವಾದಗಳು ನಡೆಯುತ್ತಿತ್ತು. ಈ ಸಂಬಂಧ ನಾಗರಿಕರ ಬಳಿ ತಾಳ್ಮೆಯಿಂದ ವರ್ತನೆ ಮಾಡಬೇಕು ಎಂದು ಗೌರವ್ ಗುಪ್ತಾ ನುಡಿದರು.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ವಿಶೇಷ ಆಯುಕ್ತ(ಘನತ್ಯಾಜ್ಯ), ಡಾ.ಹರೀಶ್ ಕುಮಾರ್, ವಿಶೇಷ ಆಯುಕ್ತ(ಆರೋಗ್ಯ) ಡಿ.ರಂದೀಪ್, ಜಂಟಿ ಆಯುಕ್ತ(ಘನತ್ಯಾಜ್ಯ), ಸರ್ಫರಾಜ್ ಖಾನ್, ವಲಯ ಜಂಟಿ ಸೇರಿದಂತೆ ಪ್ರಮುಖರಿದ್ದರು.







