ಮೂರನೆ ಅಲೆ ಎದುರಿಸಲು ರಾಜ್ಯ ಸರಕಾರ ಸರ್ವ ಸನ್ನದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಜು. 3: `ರಾಜ್ಯದಲ್ಲಿ ಎದುರಾಗಬಹುದಾದ ಕೋವಿಡ್ ಮೂರನೆ ಅಲೆಯನ್ನು ಎದುರಿಸಲು ರಾಜ್ಯ ಸರಕಾರ ಸರ್ವ ಸನ್ನದ್ಧವಾಗಿದ್ದು, ಜನ ಸಾಮಾನ್ಯರು ಭೀತಿಪಡುವ ಅಗತ್ಯವಿಲ್ಲ. ಆದರೆ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸರಕಾರದ ಮಾರ್ಗಸೂಚಿ ಪಾಲಿಸಬೇಕು' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ಶನಿವಾರ ಇಲ್ಲಿನ ಜಯನಗರದ ಐದನೆ ಬ್ಲಾಕ್ ನಲ್ಲಿರುವ ಚಂದ್ರಗುಪ್ತ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಕೋವಿಡ್ 3ನೆ ಅಲೆ ಬರುವ ಸಾಧ್ಯತೆಗಳಿವೆ ಎಂದು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಈಗಾಗಲೇ ನಾವು 2ನೆ ಅಲೆಯ ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಯಲ್ಲಿ ಸಾಕಷ್ಟು ಅನುಭವ ಪಡೆದಿರುವುದರಿಂದ ಮೂರನೆ ಅಲೆ ಎದುರಿಸಲು ಪೂರ್ವಸಿದ್ಧತೆ ಕೈಗೊಂಡಿದ್ದೇವೆ' ಎಂದು ತಿಳಿಸಿದರು.
`ಲಸಿಕೆ ಅಭಿಯಾನದ ಮೂಲಕ ಜನರಿಗೆ ಮೂರು ಲಕ್ಷ ಲಸಿಕೆಯನ್ನು ಕೊಟ್ಟಿದ್ದೇವೆ. ಸಣ್ಣಪುಟ್ಟ ತೊಂದರೆಗಳ ನಡುವೆಯೂ ರಾಜ್ಯದಲ್ಲಿ ಯಶಸ್ವಿ ಲಸಿಕೆ ಅಭಿಯಾನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲು ಕ್ರಮ ವಹಿಸುತ್ತೇವೆ. ಆ ಮೂಲಕ ಸಾಂಕ್ರಾಮಿಕ ರೋಗ ತಡೆಯಬೇಕು' ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.
ಕೋವಿಡ್ ಎರಡನೆ ಅಲೆ ಹಿನ್ನೆಲೆಯಲ್ಲಿ ಅನೇಕರು ಸಂಕಷ್ಟ ಅನುಭವಿಸಿದರು. ರಾಜ್ಯದ ಬೊಕ್ಕಸಕ್ಕೆ ಆದಾಯ ಇಲ್ಲದಿದ್ದರೂ ನಾವು ಜನತೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆವು. ದೇಶದ ಇತರೆ ಯಾವುದೇ ರಾಜ್ಯಗಳಲ್ಲಿ ಕೋವಿಡ್‍ನಿಂದ ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ. ಆದರೆ, ನಮ್ಮ ಸರಕಾರ ತಲಾ 1ಲಕ್ಷ ರೂ.ಪರಿಹಾರ ನೀಡಿದೆ.
ಜತೆಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ವರ್ಗಕ್ಕೂ ಆರ್ಥಿಕ ನೆರವು ನೀಡಲಾಗಿದೆ. ಕಲಾವಿದರು, ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು, ಹಣ್ಣು-ತರಕಾರಿ, ಹೂವು ಮಾರಾಟ ಮಾಡುವವರು, ರೈತರು ಸೇರಿದಂತೆ ಎಲ್ಲ ಸಮುದಾಯಕ್ಕೂ ನೆರವು ನೀಡಿದ್ದೇವೆ. ಅರ್ಹ ಫಲಾನುಭವಿಗಳಿಗೆ ಹಣವನ್ನು ನೇರ ವರ್ಗಾವಣೆ ಮೂಲಕ ಅವರ ಖಾತೆಗೆ ಜಮಾವಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ವಿನಯ್ ಗುರೂಜಿ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಇಳಿ ವಯಸ್ಸಿನಲ್ಲೂ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಆದರೆ, ನನಗೆ ಆ ವಯಸ್ಸಿನಲ್ಲಿ ಓಡಾಡಲು ಆಗುತ್ತದೆಯೋ ಇಲ್ಲವೋ?
ಪಿತೃಶಾಪ ನಿವಾರಣೆಗೆ ಗೋಕರ್ಣಕ್ಕೆ ನಾವು ಹೋಗುತ್ತೇವೆ. ಅದೇ ದುಡ್ಡನ್ನು ಕೊರೋನದಿಂದ ಮೃತಪಟ್ಟ ಕುಟುಂಬಗಳ ಮಕ್ಕಳಿಗೆ ನೀಡಿ ಎಂದು ಸಲಹೆ ಮಾಡಿದರು. ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಪಾಲಿಕೆ ಮಾಜಿ ಸದಸ್ಯ ಸಿ.ಕೆ.ರಾಮಮೂರ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
.jpg)







