ಫಲಾನುಭವಿಗಳಿಗೆ `ಮನೆ ಬಾಗಿಲಲ್ಲೆ ಪಡಿತರ' ಒದಗಿಸಲು ಆಡಳಿತ ಸುಧಾರಣಾ ಆಯೋಗ ಶಿಫಾರಸ್ಸು

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು. 3: `ಪಡಿತರ ಕಾರ್ಡ್ ಹೊಂದಿರುವವರು ಇಚ್ಛಿಸಿದಲ್ಲಿ ಮನೆಬಾಗಿಲಲ್ಲೆ ಪಡಿತರ ಪಡೆಯಲು, ಕಾರ್ಡುದಾರರರು ಮತ್ತು ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿದ ಶುಲ್ಕವನ್ನು ಪಾವತಿಸಿ, ಪಡಿತರ ಪಡೆದುಕೊಳ್ಳಲು ಅನುಮತಿಸುವುದು' ಸೇರಿದಂತೆ ಆಹಾರ, ಸಾರಿಗೆ, ಕಂದಾಯ ಇಲಾಖೆ ಆಡಳಿತ ಸುಧಾರಣೆಗೆ `ಆಡಳಿತ ಸುಧಾರಣಾ ಆಯೋಗ' ಒಟ್ಟು 800ಕ್ಕೂ ಹೆಚ್ಚು ಶಿಫಾರಸ್ಸುಗಳ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಲ್ಲಿಸಿದೆ.
ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರಕಾರದ ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ `ಕರ್ನಾಟಕ ಆಡಳಿತ ಸುಧಾರಣಾ ಆಯೋಗ' ಮಧ್ಯಂತರ ವರದಿ ಸಲ್ಲಿಸಿತು. ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಪಡಿತರ ಚೀಟಿ ಡೇಟಾಬೇಸ್ನೊಂದಿಗೆ ಸಂಯೋಜಿಸಬೇಕು ಅಥವಾ ಮರಣ ನೋಂದಣಿಯ ನಂತರ ಪಡಿತರ ಚೀಟಿ ಕುಟುಂಬ ಸದಸ್ಯರ ಪಟ್ಟಿ ಸ್ವಯಂಚಾಲಿತವಾಗಿ ನವೀಕರಣವಾಗುವಂತಾಗಬೇಕು. ರಾಜ್ಯದಿಂದ ಸರಕಾರ ಅನುಮೋದಿತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಬೇಕು.
`ಕಂದಾಯ ಇಲಾಖೆಯಿಂದ ನೀಡಲಾಗುವ ಕೆಲವು ಪ್ರಮಾಣಪತ್ರಗಳು ಅನುಪಯುಕ್ತವಾಗಿದೆ. ಜನಸಂಖ್ಯಾ ಪ್ರಮಾಣಪತ್ರ, ವಾಸ ಸ್ಥಳ, ಬೆಳೆ, ಕೃಷಿಕ ಪ್ರಮಾಣಪತ್ರ, ಈ ಪ್ರಮಾಣಪತ್ರಗಳನ್ನು ತೆಗೆದುಹಾಕಿ ಮತ್ತು ಪರ್ಯಾಯಗಳನ್ನು ಸೂಚಿಸಿ ಆದೇಶ ಹೊರಡಿಸಬೇಕು. ಎಲ್ಲ ಇಲಾಖೆಗಳು ನಾಗರಿಕರಿಗೆ ಒದಗಿಸುವ ಸುಮಾರು 800 ಆನ್ಲೈನ್ ಸೇವೆಗಳಿಗೆ ಅಟಲ್ಜೀ ಜನಸ್ನೇಹಿ ಕೇಂದ್ರಗಳು ಏಕಗವಾಕ್ಷಿ ಏಜೆನ್ಸಿಯಾಗಬೇಕು.
ಈ ಸೇವೆಗಳು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾ.ಪಂ.ಬಾಪೂಜಿ ಸೇವಾ ಕೇಂದ್ರಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಲಭ್ಯವಾಗಬೇಕು. ಎಲ್ಲ ಸಕಾಲ ಅರ್ಜಿಗಳಲ್ಲಿ ಶೇ.81ರಷ್ಟು ಅರ್ಜಿಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗುತ್ತಿವೆ. ಎಲ್ಲ ಇಲಾಖೆಗಳ ಸಕಾಲ ಮತ್ತು ಸಕಾಲವಲ್ಲದ ಸುಮಾರು 800 ಇ-ಸೇವೆಗಳಿಗೆ ಸೇವಾ ಸಿಂಧು ಏಕಮಾತ್ರ ವೇದಿಕೆ ಆಗಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.
ರಾಜ್ಯ ಸರಕಾರದ ಎಲ್ಲಾ ಇ-ಪೇಟೆಗಳನ್ನು ಮೊಬೈಲ್ ಮೂಲಕ ಒದಗಿಸಲು, ಕರ್ನಾಟಕ ಮೊಬೈಲ್ ಒನ್ ಆ್ಯಪ್ ಅನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು. ಎಜೆಎಸ್ಕೆ, ಭೂಮಿ, ಎಸ್ಎಸ್ಪಿ, ಐಜಿಎಸ್ಎಲ್ ಮತ್ತು ಎಸ್ಎಸ್ಎಲ್ಆರ್ ಸೇವಾ ಪೆÇೀರ್ಟಲ್ಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಆನ್ಲೈನ್ ವ್ಯಾಲೆಟ್ ವ್ಯವಸ್ಥೆಯನ್ನು ಬಳಸಿಕೊಂಡು ಅರ್ಜಿ ಶುಲ್ಕವನ್ನು ಸಂಗ್ರಹಿಸಲು ಯುಪಿಐ, ಕ್ಯೂಆರ್ ಕೋಡ್ ಪಾವತಿ ವಿಧಾನ ಹೊಂದಿರಬೇಕು.
ಭೂಸ್ವಾಧೀನ ನಿರ್ವಹಣಾ ಸಾಫ್ಟ್ವೇರ್ ವ್ಯವಸ್ಥೆಯನ್ನು ಕಂದಾಯ ಇಲಾಖೆ ತ್ವರಿತವಾಗಿ ಅಭಿವೃದ್ಧಿಪಡಿಸಬೇಕು. ಸೂಕ್ತವಾದ ಮಾರ್ಪಾಡುಗಳನ್ನು ಮಾಡುವ ಮೂಲಕ ಕೆಐಎಡಿಬಿ, ಬಿಡಿಎ, ಎನ್ಎಚ್ಐ ಸೇರಿದಂತೆ ವಿವಿಧ ಭೂ ಸ್ವಾಧೀನಪಡಿಸಿಕೊಳ್ಳುವ ಸಂಸ್ಥೆಗಳಿಂದ ಬಳಸುವುದನ್ನು ಕಡ್ಡಾಯಗೊಳಿಸಲು ಆದೇಶ ಹೊರಡಿಸಬೇಕು. ಅಡಮಾನ ನೋಂದಣಿ, ಭೂಮಿ ಅಥವಾ ನಿವೇಶನಗಳ ಅಡಮಾನ ಬಿಡುಗಡೆಗೊಳಿಸಲು ಮತ್ತು ಎನ್ಕಂಬೈನ್ಸ್ ನೀಡುವ ವಿಧಾನ ಸರಳೀಕರಿಸಬೇಕು ಮತ್ತು ಸಂಪೂರ್ಣವಾಗಿ ಆನ್ಲೈನ್ನಲ್ಲಿ ಮಾಡಬೇಕು.
ಕಾವೇರಿ-2 ಮತ್ತು ಆನ್ಲೈನ್ ಸೇವೆಯನ್ನು (ಕೆಪಿಎಸ್-2) ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕು. ಉಪನೋಂದಣಾಧಿಕಾರಿಗಳ ಕಚೇರಿಗೆ ಬರುವ ಮೊದಲು ಯಾವುದೆ ಸಮಸ್ಯೆಯೆ ಇಲ್ಲದೆ ನೋಂದಣಿ ಪೂರ್ವ ದತ್ತಾಂಶ ನಮೂದು ಮಾಡಲು ಅವಕಾಶ ಮಾಡಿಕೊಡುತ್ತದೆ. ಸಂಬಂಧಪಟ್ಟವರಿಗೆ ಹೆಚ್ಚಿನ ಸಮಯವನ್ನು ಉಳಿಸುತ್ತದೆ. ಎಜೆಎಸ್ಕೆ, ತಹಶೀಲ್ದಾರ್, ಎಡಿಎಲ್ಆರ್, ಸಬ್ ರಿಜಿಸ್ಟ್ರಾರ್ ಕಚೇರಿಗಳಿಂದ ಮೇಲಿನ ಎಲ್ಲ ಕಚೇರಿಗಳಿಗೆ ಇ-ಆಫೀಸ್ ಕಡ್ಡಾಯಗೊಳಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಅಧಿಕಾರಿಗಳಾಗಿ ಮರು ಪದನಾಮಕಾರಣ ಮಾಡಬಹುದು. ಎಲ್ಲ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಬಹುದು ಎಂದು ಸಲಹೆ ನೀಡಲಾಗಿದೆ.
ಪ್ರಸ್ತುತ ಆರ್ಟಿಒ ಸೇವೆಗಳಿಗೆ ನಾಗರಿಕರು ಕಾಗದದ ಅರ್ಜಿ ಮತ್ತು ಆನ್ಲೈನ್ ಅರ್ಜಿ ಎರಡರಲ್ಲೂ ಸಲ್ಲಿಸಲಾಗುತ್ತಿದೆ. ನಾಗರಿಕರಿಗೆ ಎಲ್ಲ ಆರ್ಟಿಒ ಸೇವೆಗಳನ್ನು ಕಾಗದರಹಿತವಾಗಿ ಮಾಡಬೇಕು. ಯಾವುದೇ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಾಖಲೆಗಳನ್ನು ನೋಂದಾಯಿಸಲು ಅವಕಾಶವಿರುವಂತೆ, ಸುಲಭವಾಗಿ ಸೇವೆಗಳನ್ನು ಪಡೆಯಲು ನಾಗರಿಕರು ಬೆಂಗಳೂರು ನಗರದ ಯಾವುದೇ ಆರ್ಟಿಒ ಕಚೇರಿ ಆಯ್ಕೆ ಮಾಡಿಕೊಳ್ಳುವಂತಿರಬೇಕು. ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಹೆಚ್ಚಿನ ಹಳೆಯ ದಾಖಲೆಗಳನ್ನು ಹೊಂದಿರುವ ಆರ್ಟಿಒ ಕಚೇರಿಗಳಿಂದ ಆರಂಭಿಸಿ, ಎಲ್ಲ ಆರ್ಟಿಒ ಕಚೇರಿಗಳಲ್ಲಿಯೂ ಕೆಲವು ವರ್ಷಗಳಲ್ಲಿ ಅನುಷ್ಠಾನಗೊಳಿಸಬಹುದೆಂದು ಶಿಫಾರಸ್ಸು ಮಾಡಲಾಗಿದೆ.
ವರದಿ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಮತ್ತು ಸಮಿತಿಯ ಸದಸ್ಯ ಎನ್.ಎಸ್.ಪ್ರಸನ್ನಕುಮಾರ್ ಹಾಜರಿದ್ದರು.
`ರಾಜ್ಯ ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುವ ಹಾಗೂ ನಾಗರಿಕರ ಮಧ್ಯೆ ಕಾರ್ಯನಿರ್ವಹಿಸುವ ಸಿಬ್ಬಂದಿ ಜೊತೆ ಆಡಳಿತ ಸುಧಾರಣಾ ಆಯೋಗ ಹಲವು ಗುಂಪು ಚರ್ಚೆ ನಡೆಸಿದೆ. 57 ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಪ್ರೊಬೇಷನರಿ ಅಧಿಕಾರಿಗಳ ಗುಂಪು ಕ್ಷೇತ್ರ ಸಮೀಕ್ಷೆ ನಡೆಸಿ ಆಯೋಗ ಈ ವರದಿ ತಯಾರು ಮಾಡಿದೆ'
-ಟಿ.ಎಂ.ವಿಜಯಭಾಸ್ಕರ್ ಆಡಳಿತ ಸುಧಾರಣಾ ಆಯೋಗ ಮುಖ್ಯಸ್ಥರು







