ಮಡಿಕೇರಿ: ಎರಡು ತಲೆಯ ಹಾವು ಮಾರಾಟ ಯತ್ನ; ನಾಲ್ವರ ಬಂಧನ

ಮಡಿಕೇರಿ ಜು.3 : ಅಳಿವಿನಂಚಿನಲ್ಲಿರುವ ಎರಡು ತಲೆಯ ಹಾವಿನೊಂದಿಗೆ ದಾವಣಗೆರೆಯಿಂದ ಕಾರಿನಲ್ಲಿ ಬರುತ್ತಿದ್ದ ನಾಲ್ವರ ಆರೋಪಿಗಳನ್ನು ವಿರಾಜಪೇಟೆ ತಾಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ.
ಗೋಣಿಕೊಪ್ಪದ ದೇವರಪುರ ಸಮೀಪ ದಾಳಿ ನಡೆಸಿದ ಸಿಬ್ಬಂದಿ ಕಾರು, ಎರಡು ತಲೆಯ ಹಾವು ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಗಾರೆ ಕೆಲಸಗಾರರಾದ ದಾವಣಗೆರೆಯ ಅಧಡಿ ಗ್ರಾಮದ ನಿವಾಸಿ ಎಸ್.ಹೆಚ್.ಶಿವಕುಮಾರ್ (34), ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಶಿರಹಟ್ಟ ಗ್ರಾಮದ ನಿವಾಸಿ ಮಲ್ಲಕ್‍ಸಾಬ್‍ಹೊಂಟೀ (37), ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಬಂಕಾಪುರ ಗ್ರಾಮದ ಮಹಮ್ಮದ್ ಖಾಸಿಂ ಮಕಂದರ್ (24) ಹಾಗೂ ಇದೇ ಜಿಲ್ಲೆಯ ಬಂಜಾಮರ ಗ್ರಾಮದ ಮಹಾರ್ ಸತ್ತರ್ ಶೇಖ್ (35) ಬಂಧಿತ ಆರೋಪಿಗಳು.
ಬಂಧಿತರನ್ನು ಪೊನ್ನಂಪೇಟೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿದಳದ ಆರಕ್ಷಕ ಉಪನಿರೀಕ್ಷಕಿ ಕು: ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ.ಸೋಮಣ್ಣ, ಟಿ.ಪಿ.ಮಂಜುನಾಥ್, ಪಿ.ಬಿ.ಮೊಣ್ಣಪ್ಪ, ಎಂ.ಬಿ.ಗಣೇಶ್, ಎಸ್.ಎಂ.ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.





