ವಿಂಬಲ್ಡನ್ ಲಾಸ್ಟ್-16 ಗೆ ಟ್ಯುನೀಶಿಯದ ಜಬೇರ್ ಲಗ್ಗೆ: ವಿಂಬಲ್ಡನ್ ನಲ್ಲಿ ಸಾಧನೆ ಮಾಡಿದ ಪ್ರಪ್ರಥಮ ಅರಬ್ ವನಿತೆ
Photo: twitter.com/Ons_Jabeur
ವಿಂಬಲ್ಡನ್, ಜು.3: ವಿಂಬಲ್ಡನ್ ಟೆನ್ನಿಸ್ ಪಂದ್ಯಕೂಟದ ಲಾಸ್ಟ್-16ಗೆ ತಲುಪಿದ ಪ್ರಪ್ರಥಮ ಅರಬ್ ಮಹಿಳೆಯೆಂಬ ಹೆಗ್ಗಳಿಕೆಗೆ ಟ್ಯುನೀಶಿಯದ ಓನಸ್ ಜಬೇರ್ ಪಾತ್ರರಾಗಿದ್ದಾರೆ.
ಶುಕ್ರವಾರ ನಡೆದ ಎರಡು ತಾಸು, 26 ನಿಮಿಷಗಳ ಕಾಲ ನಡೆದ ರೋಚಕ ಹಣಾಹಣಿಯಲ್ಲಿ ಅದ್ಭುತವಾದ ಟೆನ್ನಿಸ್ ಕೌಶಲ್ಯವನ್ನು ಪ್ರದರ್ಶಿಸಿದ 26 ವರ್ಷ ವಯಸ್ಸಿನ ಓನಸ್ ಜಬೇರ್ ಅವರು 2017ರ ಚಾಂಪ್ಯನ್ ಗಾರ್ಬೈನ್ ಮುಗುರುಝಾ ಅವರನ್ನು 5-7,6-3, 6-2 ಪಾಯಿಂಟ್ಗಳಿಂದ ಸೋಲಿಸಿದರು. ಎರಡನೆ ಸುತ್ತಿನಲ್ಲಿ ಜಬೇರ್,ವಿಶ್ವದ ಮಾಜಿ ನಂ.1 ಆಟಗಾರ್ತಿ ವೀನಸ್ ವಿಲಿಯಮ್ಸ್ ಅವರನ್ನು ಪರಾಭವಗೊಳಿಸಿದರು.
ಟೆನ್ನಿಸ್ ಜಗತ್ತಿನ ಉದಯೋನ್ಮುಖ ಪ್ರತಿಭೆ ಜಬೇರ್ ರ ಅದ್ವಿತೀಯ ಸಾಧನೆಗೆ ಸ್ವತಃ ವೀನಸ್ ವಿಲಿಯಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘‘ಪ್ರಾಮಾಣಿಕವಾಗಿ ಹೇಳುವುದಾದರೆ, ಆಕೆ ಅಡೆತಡೆಗಳನ್ನು ಮುರಿದಿದ್ದಾರೆ. ಆಕೆಯ ದೇಶದ ಯಾವುದೇ ಮಹಿಳೆ ಮಾಡಿರದಂತಹ ಸಾಧನೆಯನ್ನವರು ಮಾಡಿದ್ದಾರೆ. ನನ್ನನ್ನು ಸೇರಿದಂತೆ ಹಲವಾರು ಮಂದಿಗೆ ಜಬೇರ್ ಸ್ಫೂರ್ತಿಯಾಗಿದ್ದಾರೆ ’’ಎಂದವರು ಪ್ರಶಂಸಿಸಿದ್ದಾರೆ.
ಪಂದ್ಯವು ಎರಡು ಮ್ಯಾಚ್ ಪಾಯಿಂಟ್ ನೆಡೆಗೆ ಸಾಗಿದ ಸಂದರ್ಭದಲ್ಲಿ ಜಬೇರ್ ಅವರು ದೈಹಿಕವಾಗಿ ಬಳಲಿದ್ದರು. ಹೊಟ್ಟೆಯ ಉರಿಯೂತ ಮತ್ತು ಆಯಾಸದಿಂದಾಗಿ ಟೆನ್ನಿಸ್ ಕೋರ್ಟ್ ನ ಬದಿಯಲ್ಲಿ ನೆಲಕ್ಕೆ ಮೊಣಕಾಲೂರಿ ಕುಳಿತಿದ್ದರು. ಒತ್ತಡ, ಬಳಲಿಕೆಯ ನಡುವೆಯೂ ಜಬೇರ್ ಆಟ ಮುಂದುವರಿಸಿದರಾದರೂ, ಆ ಹಂತದಲ್ಲಿ ಮುರ್ಗುಝಾ ಮ್ಯಾಚ್ ಪಾಯಿಂಟ್ ಗಳಿಸಿದರು. ಆದರೆ ಎರಡನೆ ಹಂತದಲ್ಲಿ ಅದ್ಭುತವಾಗಿ ಆಡಿದ ಜಬೇರ್ ಎದುರಾಳಿಗೆ ಯಾವುದೇ ಅವಕಾಶವನ್ನು ನೀಡದೆ ಗೆಲುವನ್ನು ತನ್ನದಾಗಿಸಿಕೊಂಡರು.
2020ರ ಆಸ್ಟ್ರೇಲಿಯ ಒಪನ್ ಟೆನ್ನಿಸ್ ಚಾಂಪ್ಯನ್ ಶಿಪ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪುವ ಮೂಲಕ ಜಬೇರ್ ಅವರು ಮೊದಲಬಾರಿಗೆ ಜಗತ್ತಿನ ಗಮನಸೆಳೆದಿದ್ದರು.
ಫ್ರೆಂಚ್ ಓಪನ್ ಟೆನ್ನಿಸ್ ಪಂದ್ಯಕೂಟದ ಲಾಸ್ಟ್ 16ಗೆ ಎರಡು ಬಾರಿ ತಲುಪುವಲ್ಲಿ ಜಬೇರ್ ಸಫಲರಾಗಿದ್ದರು. ಇದೀಗ ವಿಂಬಲ್ಡನ್ನಲ್ಲೂ ಅವರು ಆ ಸಾಧನೆಯನ್ನು ಪುನರಾವರ್ತಿಸಿದ್ದಾರೆ.
ಕಳೆದ ತಿಂಗಳು ಬರ್ಮಿಗ್ಹ್ಯಾಂನಲ್ಲಿ ನಡೆದ ಡಬ್ಲುಟಿಎ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದ ಜಬೇರ್, ಆ ಸಾಧನೆ ಮಾಡಿದ ಪ್ರಪ್ರಥಮ ಆರಬ್ ಮಹಿಳೆಯೆನಿಸಿದ್ದರು. ಇದು ನನ್ನ ಜೀವನದ ಅತ್ಯುತ್ತಮವಾದ ದಿನವಾಗಿದೆ. ಹವಾರು ಆರಬ್ ಜನತೆ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ವಿಭಿನ್ನ ಜನರಿಂದ ನಾನು ಬಹಳಷ್ಟು ಅಭಿನಂದನಾ ಸಂದೇಶಗಳನ್ನು ಸ್ವೀಕರಿಸಿದ್ದೇನೆ. ಆದರೆ ನನ್ನ ಪ್ರಯಾಣವು ಇಲ್ಲಿಯೇ ನಿಲ್ಲುವುದು ನನಗೆ ಬೇಕಿಲ್ಲ. ನಾನದನ್ನು ಮುಂದುವರಿಸಬಯಸುತ್ತೇನೆ ಎಂದು ಜಬೇರ್ ಹೇಳಿದ್ದಾರೆ.