ಡೀಸೆಲ್ ಬೆಲೆ ಹೆಚ್ಚಿದಂತೆ ಬಸ್ ಪ್ರಯಾಣ ದರ ಪರಿಷ್ಕರಣೆ: ಕೆನರಾ ಬಸ್ ಮಾಲಕರ ಸಂಘದ ಸಭೆಯಲ್ಲಿ ಸರಕಾರಕ್ಕೆ ಆಗ್ರಹ
ಉಡುಪಿ, ಜು. 3: ಜಿಲ್ಲಾಡಳಿತ ಖಾಸಗಿ ಬಸ್ ಪ್ರಯಾಣ ದರ ಶೇ.20ರಿಂದ 25ಹೆಚ್ಚಳಕ್ಕೆ ನೀಡಿದ ಅವಕಾಶಕ್ಕೆ ಸರಕಾರದಿಂದ ಅಂಗೀಕಾರ ಪಡೆಯುವ ಹಾಗೂ ಡೀಸೆಲ್ ದರ ಹೆಚ್ಚಿದಂತೆ ಬಸ್ ಪ್ರಯಾಣ ದರ ಪರಿಷ್ಕರಣೆಗೆ ದರ ನಿಯಂತ್ರಣ ಮಂಡಳಿ ರಚಿಸು ವಂತೆ ಸರಕಾರವನ್ನು ಒತ್ತಾಯಿಸುವ ಬಗ್ಗೆ ಶನಿವಾರ ಉಡುಪಿಯ ಶಾರದಾ ಇಂಟರ್‌ನೇಶನಲ್ ಹೊಟೇಲ್‌ನಲ್ಲಿ ನಡೆದ ಕೆನರಾ ಬಸ್ ಮಾಲಕ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊರೊನಾ ಲಾಕ್‌ಡೌನ್ ವೇಳೆ ನಿಲುಗಡೆಗೊಳಿಸಲಾದ ಬಸ್‌ಗಳನ್ನು ಹಂತ ಹಂತವಾಗಿ ಓಡಿಸುವ ಬಗ್ಗೆ ನಿರ್ಣಯಿಸಲಾಯಿತು. ಪ್ರಯಾಣದ ಸಂದರ್ಭ ವಿದ್ಯಾರ್ಥಿಗಳು ಕಡ್ಡಾಯವಾಗಿ ರಿಯಾಯಿತಿ ಪಾಸು ಹೊಂದಿರಬೇಕು. ಯಾವುದೇ ಕಾರಣಕ್ಕೂ ಕಾರ್ಡ್ ಇಲ್ಲದೆ ಪ್ರಯಾಣಿಸಲು ಅವಕಾಶ ನೀಡ ಬಾರದು ಮತ್ತು ಪಾಸ್ ಇಲ್ಲದವರಿಂದ ಪೂರ್ತಿ ದರವನ್ನು ಪಡೆಯುವ ಬಗ್ಗೆ ತೀರ್ಮಾನಿಸಲಾಯಿತು.
ಆರು ತಿಂಗಳ ತೆರಿಗೆಯನ್ನು ಮನ್ನಾ ಮಾಡುವಂತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಇದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು. ಸಚಿವರೂ ಸರಕಾರದ ಮೇಲೆ ಒತ್ತಡ ತರಬೇಕು. ಡೀಸೆಲ್ ದರವನ್ನು ಪರಿಷ್ಕರಿಸುವ ವೇಳೆ ಬಸ್ ದರವನ್ನೂ ಪರಿಷ್ಕರಿ ಸಲು ಅವಕಾಶ ಕೊಡಬೇಕು ಎಂದು ಸರಕಾರವನ್ನು ಒತ್ತಾಯಿಸ ಲಾಯಿತು.
ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಪ್ರಯಾಣ ಏಕ ದರ ಮತ್ತು ಕೆಎಸ್‌ಆರ್‌ಟಿಸಿ ಪರ್ಮಿಟ್ ವಿಚಾರವನ್ನು ಸಾರಿಗೆ ಸಚಿವರ ಹಾಗೂ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆ ಆಗ್ರಹಿಸಿತು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ ನಾಯಕ್, ಖಜಾಂಚಿ ಜ್ಯೋತಿ ಪ್ರಸಾದ ಹೆಗ್ಡೆ, ಉಪಾಧ್ಯಕ್ಷ ಸದಾನಂದ ಚಾತ್ರ, ಕಿನ್ನಿಗೋಳಿ ವಲಯದ ಅಧ್ಯಕ್ಷ ದುರ್ಗಾಪ್ರಸಾದ ಹೆಗ್ಡೆ, ಶಿರ್ವ ವಲಯದ ಅಧ್ಯಕ್ಷ ಶಿವರಾಮ ಶೆಟ್ಟಿ, ಪದಾಧಿಕಾರಿಗಳಾದ ಪ್ರಸಾದ ಬಲ್ಲಾಳ್, ಸುಭಾಸ್ ರೈ, ಮಾಧವ ನಾಯಕ್, ಕಿಶನ್ ಹೆಗ್ಡೆ ಕೊಳ್ಕೆಬೆಲ್ ಮೊದಲಾದವರು ಹಾಜರಿದ್ದರು.







