ಎಸ್ಸಿ/ಎಸ್ಟಿಗಳಿಗೆ ತಾರತಮ್ಯ, ಶುಲ್ಕ ಏರಿಕೆ ವಿರುದ್ಧ ಧ್ವನಿಯೆತ್ತಿದ್ದ ವಿದ್ಯಾರ್ಥಿನಿಗೆ ದಂಡ
ಅಂಬೇಡ್ಕರ್ ವಿವಿ ಘಟಿಕೋತ್ಸವ

ಹೊಸದಿಲ್ಲಿ,ಜು.3: ಕಳೆದ ವರ್ಷದ ಡಿಸೆಂಬರ್ ನಲ್ಲಿ ನಡೆದಿದ್ದ ಆನ್ ಲೈನ್ ಘಟಿಕೋತ್ಸವದ ಸಂದರ್ಭ ವಿವಿಯ ವಿವಿಧ ನೀತಿಗಳ ವಿರುದ್ಧ ಆನ್ ಲೈನ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘ(ಎಐಎಸ್ಎ)ದ ರಾಜ್ಯ ಉಪಾಧ್ಯಕ್ಷೆಯೂ ಆಗಿರುವ ವಿದ್ಯಾರ್ಥಿನಿಗೆ ಅಂಬೇಡ್ಕರ್ ವಿವಿ ದಿಲ್ಲಿ (ಎಯುಡಿ) 5,000 ರೂ.ಗಳ ದಂಡವನ್ನು ವಿಧಿಸಿದೆ.
ವಿದ್ಯಾರ್ಥಿನಿ ನೇಹಾ ನಿಂದನೀಯ ಮತ್ತು ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿದ್ದರು ಮತ್ತು ತನ್ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಅಗೌರವವನ್ನು ಪ್ರದರ್ಶಿಸಿದ್ದರು ಎಂದು ವಿವಿಯು ಆರೋಪಿಸಿದೆ.
ಅಂತಿಮ ಪರೀಕ್ಷೆಗಳಿಗೆ ಹಾಜರಾಗುವ ಇಚ್ಛೆಯಿದ್ದರೆ ದಂಡವನ್ನು ಪಾವತಿಸುವುದು ಅನಿವಾರ್ಯ ಎಂದು ವಿವಿಯು ತನ್ನ ಜೂ.30ರ ಆದೇಶದಲ್ಲಿ ಎಂ.ಎ.(ಪರ್ಫಾರ್ಮನ್ಸ್ ಸ್ಟಡೀಸ್) ಅಂತಿಮ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ನೇಹಾಗೆ ತಾಕೀತು ಮಾಡಿದೆ.
ತನ್ನ ವಿರುದ್ಧದ ಆರೋಪಗಳಿಗೆ ಪ್ರತಿಭಟನೆಯನ್ನು ವ್ಯಕ್ತಪಡಿಸಿರುವ ನೇಹಾ,ತನ್ನನ್ನು ಮಾತ್ರ ಗುರಿಯಾಗಿಸಿಕೊಳ್ಳಲಾಗಿದೆ ಮತ್ತು ತಾನು ನೀಡಿದ್ದೇನೆ ಎಂದು ಹೇಳಲಾಗಿರುವ ಹೇಳಿಕೆಗಳು ಯು ಟ್ಯೂಬ್ ಲೈವ್ ಸ್ಟ್ರೀಮಿಂಗ್ ಲಿಂಕ್ ನಲ್ಲಿ ಪೋಸ್ಟ್ ಮಾಡಲ್ಪಟ್ಟಿದ್ದವು ಎಂದು ಸಮರ್ಥಿಸಿಕೊಂಡಿದ್ದಾರೆ.
ಆನ್ ಲೈನ್ ಘಟಿಕೋತ್ಸವದ ಸಂದರ್ಭದಲ್ಲಿ ನೇಹಾ ಮೀಸಲಾತಿ ನೀತಿಯಲ್ಲಿ ಸಾಂವಿಧಾನಿಕ ಬದಲಾವಣೆಗಳು ಮತ್ತು ಭಾರೀ ಶುಲ್ಕಗಳ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪ್ರಸ್ತಾಪಿಸಿದ್ದರು ಮತ್ತು ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಲ್ಲ ಎಂದು ಆರೋಪಿಸಿದ್ದರು ಎಂದು ವಿವಿಯು ತನ್ನ ಆದೇಶದಲ್ಲಿ ಆಪಾದಿಸಿದೆ. ವಿವಿಯು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ವಿರುದ್ಧ ತಾರತಮ್ಯವನ್ನು ತೋರಿಸುತ್ತಿದೆ ಎಂದೂ ವಿದ್ಯಾರ್ಥಿಗಳು ಆರೋಪಿಸಿದ್ದರು.







