ಹಿರಿಯ ಪ್ರಸೂತಿ ತಜ್ಞೆ ಡಾ. ಮನೋರಮಾ ರಾವ್ ನಿಧನ

ಮಂಗಳೂರು, ಜು.3: ನಗರದ ಹಿರಿಯ ಪ್ರಸೂತಿ ತಜ್ಞೆ, ಜಯಶ್ರೀ ನರ್ಸಿಂಗ್ ಹೋಂನ ಸ್ಥಾಪಕಿ ಡಾ. ಎಚ್.ಟಿ. ಮನೋರಮಾ ರಾವ್ (89) ಶುಕ್ರವಾರ ತಡರಾತ್ರಿ ತನ್ನ ಸ್ವಗೃಹದಲ್ಲಿ ನಿಧನರಾದರು. ಮೂಲತಃ ಹೆಜಮಾಡಿ ನಿವಾಸಿಯಾಗಿದ್ದ ಇವರು ತನ್ನ 15ನೆ ಹರೆಯದಲ್ಲಿ ಹಯವದನ ರಾವ್‌ರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಒಂದುವರೆ ವರ್ಷದಲ್ಲೇ ಪತಿಯನ್ನು ಕಳೆದುಕೊಂಡರು. ಆದರೂ ಧೃತಿಗೆಡದೆ ಸ್ವಸಾಮರ್ಥ್ಯ ಮತ್ತು ತನ್ನ ತಂದೆ ಶ್ರೀಧರ ರಾವ್ ಮತ್ತು ತಾಯಿ ಜಯಲಕ್ಷ್ಮಿ ರಾವ್‌ರ ಪ್ರೇರಣೆಯಿಂದ ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆದರು, ಬಳಿಕ ವಿಶಾಖಪಟ್ಟಣದಲ್ಲಿ ಡಿಜಿಒ ಮತ್ತು ಎಂಡಿ ಪೂರ್ತಿಗೊಳಿಸಿದರು.
1960ರ ದಶಕದಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿಗೆ ಸೇರಿದ ಅವರು ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ಮಧ್ಯೆ ತನ್ನ ಒಡಹುಟ್ಟಿದ ಸಹೋದರ-ಸಹೋದರಿಯರನ್ನು ವೈದ್ಯಕೀಯ ರಂಗದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು. 1992ರಲ್ಲಿ ಕೆಎಂಸಿ ಆಸ್ಪತ್ರೆಯ ಸೇವೆಯಿಂದ ನಿವೃತ್ತರಾದರು.
1974ರಲ್ಲಿ ಸಹೋದರ-ಸಹೋದರಿಯರ ಜೊತೆಗೂಡಿ ನಗರದ ಕೆಎಸ್ ರಾವ್ ರಸ್ತೆಯಲ್ಲಿ ಜಯಶ್ರೀ ನರ್ಸಿಂಗ್ ಹೋಂ ಮತ್ತು 1983ರಲ್ಲಿ ಹೊಟೇಲ್ ಮನೋರಮಾ ಸ್ಥಾಪಿಸಿದರು.
ತನ್ನ 88ರ ಹರೆಯದವರೆಗೂ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಸುಮಾರು 25 ಸಾವಿರಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿ ಗಮನ ಸೆಳೆದಿದ್ದರು.ಅವರ ವೈದ್ಯಕೀಯ ಸೇವೆಯನ್ನು ಗುರುತಿಸಿ 2018ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇಂಡಿಯನ್ ಮೆಡಿಕಲ್ ಅಸೋಶಿಯೇಶನ್‌ನ ಜೀವಮಾನ ಸಾಧನಾ ಪ್ರಶಸ್ತಿ, ಎಕ್ಸಲೆಂಟ್ ಡಾಕ್ಟರ್ ಪ್ರಶಸ್ತಿ, ಕೆಎಂಸಿ ಯಿಂದ ಬೆಸ್ಟ್ ಟೀಚರ್ ಅವಾರ್ಡ್ ಸಹಿತ ನೂರಾರು ಪ್ರಶಸ್ತಿಗಳನ್ನು ಪಡೆದಿದ್ದರು.
ಸಂತಾಪ: ಡಾ. ಮನೋರಮಾ ರಾವ್‌ರ ನಿಧನ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಡಾ. ಪ್ರಭಾಕರ ಜೋಶಿ, ಮಾಜಿ ಶಾಸಕ ಕುಂಬಳೆ ಸುಂದರ ರಾವ್ ಸಂತಾಪ ಸೂಚಿಸಿದ್ದಾರೆ.







