ಕಾಶ್ಮೀರ: ಸ್ವಇಚ್ಛೆಯಿಂದ ಸಿಖ್ಖ್ ಯುವತಿಯರ ಮತಾಂತರ, ವಿವಾಹ; ಇಂಡಿಯಾ ಟುಡೇ ವರದಿ
"ಯಾವುದೇ ಬೆದರಿಕೆ, ಒತ್ತಡವಿರಲಿಲ್ಲ"

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಜು.21: ಜಮ್ಮುಕಾಶ್ಮೀರದಲ್ಲಿ ಇಬ್ಬರು ಸಿಖ್ಖ್ ಮಹಿಳೆಯರಿಗೆ ಇಸ್ಲಾಂಗೆ ಮತಾಂತರಗೊಳ್ಳಲು ಯಾವುದೇ ಒತ್ತಡ ಹೇರಲಾಗಿರಲಿಲ್ಲ ಹಾಗೂ ಅವರು ಸ್ವಇಚ್ಛೆಯಿಂದ ವಿವಾಹವಾಗಿದ್ದಾರೆಂದು ಇಂಡಿಯಾ ಟುಡೆ ಟಿವಿ ಸುದ್ದಿವಾಹಿನಿಯ ತನಿಖಾ ವರದಿಯೊಂದು ಬಹಿರಂಗಪಡಿಸಿದೆ.
ಈ ಇಬ್ಬರು ಸಿಖ್ಖ್ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಿಸಿ ವಿವಾಹ ಮಾಡಲಾಗಿದೆಯೆಂದು ಕೆಲವು ಸಿಖ್ಖ್ ಸಂಘಟನೆಗಳು ಆಪಾದಿಸಿ ಜೂನ್ 27ರಂದು ಶ್ರೀನಗರದಲ್ಲಿ ಕೆಲವು ಸಿಖ್ಖ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಇಬ್ಬರು ಯುವತಿಯರು ತಮ್ಮ ಮತಾಂತರ ಹಾಗೂ ವಿವಾಹಕ್ಕೆ ಸಂಬಂಧಿಸಿ ಸಲ್ಲಿಸಿದ ಅಫಿಡವಿಟ್ಗಳು ಹಾಗೂ ದಾಖಲೆಗಳ ಪ್ರತಿಗಳು ತನಗೆ ಲಭ್ಯವಾಗಿರುವುದಾಗಿ ಇಂಡಿಯಾಟುಡೇ ಟಿವಿ ವಾಹಿನಿಯ ವರದಿಗಳು ತಿಳಿಸಿವೆ.
ತಾವು ವಯಸ್ಕರಾಗಿದ್ದು ಸ್ವಂತ ಇಚ್ಛೆಯಿಂದ ಇಸ್ಲಾಂಗೆ ಮತಾಂತರವಾಗಿರುವುದಾಗಿ ಯುವತಿಯರಾದ ಮನ್ಮೀತ್ ಕೌರ್ ಬಾಲಿ ಹಾಗೂ ದಲ್ಪ್ರೀತ್ ಅವರು ಅಫಿಡವಿಟ್ ಹಾಗೂ ದಾಖಲೆಗಳಲ್ಲಿ ತಿಳಿಸಿದ್ದಾರೆಂದು ಇಂಡಿಯಾಟುಡೆ ಟಿವಿ ವರದಿ ತಿಳಿಸಿದೆ.
ಜೂನ್ 22ರಂದು ಮನ್ಮೀತ್ (ಯಾನೆ ರೆಯಾ) ಸಲ್ಲಿಸಿದ ಅಫಿಡವಿಟ್ನಲ್ಲಿ ತನಗೆ 19 ವರ್ಷ ವಯಸ್ಸಾಗಿದ್ದು, ಯಾವುದೇ ಒತ್ತಡ ಅಥವಾ ಬೆದರಿಕೆಗೊಳಗಾಗದೆ ಇಸ್ಲಾಂಗೆ ಮತಾಂತರವಾಗಿರುವುದಾಗಿ ತಿಳಿಸಿದ್ದಾರೆ. ತಾನು ಕಳೆದ ಒಂದು ವರ್ಷದಿಂದ ಇಸ್ಲಾಂ ಧರ್ಮವನ್ನು ಆಚರಿಸುತ್ತಿರುವುದಾಗಿಯೂ ಆಕೆ ತಿಳಿಸಿದ್ದಾರೆ.
ನೆರೆಮನೆಯಾತ ಶಹೀದ್ ನಝರ್ (29) ಹಾಗೂ ತಾನು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ವರ್ಷ ವಿವಾಹವಾಗಲು ನಿರ್ಧರಿಸಿದ್ದೆವು ಎಂದು ಆಕೆ ಅಫಿಡವಿಟ್ನಲ್ಲಿ ಹೇಳಿದ್ದಾರೆ. ಜೂನ್ 5ರಂದು ಇವರಿಬ್ಬರ ನಿಖಾ ಕಾರ್ಯಕ್ರಮ ನಡೆದಿರುವುದಾಗಿ ದಾಖಲೆಗಳಿಂದ ತಿಳಿದುಬಂದಿರುವುದಾಗಿ ಇಂಡಿಯಾ ಟುಡೇ ತಿಳಿಸಿದೆ.
ತನ್ನ ವಿವಾಹದ ನೋಂದಣಿಗಾಗಿ ಕಳೆದ ವಾರ ಶ್ರೀನಗರದ ನ್ಯಾಯಾಲಯಕ್ಕೆ ತೆರಳುತ್ತಿದ್ದ ಮನಮೀತ್ಳನ್ನು ಕೆಲವು ಸಿಖ್ಖ್ ಯುವಕರು ಕಾರಿನಿಂದ ಹೊರಗೆಳೆದು ಥಳಿಸಿದ್ದರು. ಆಕೆಯ ಪತಿಯ ವಿರುದ್ಧ ಅಪಹರಣದ ಆರೋಪವನ್ನು ಹೊರಿಸಲಾಗಿದ್ದು, ಇನ್ನೂ ಜಾಮೀನು ದೊರೆತಿಲ್ಲ.
ಇನ್ನೋರ್ವ ಯುವತಿ, ಕಾಶ್ಮೀರದ ಬಡ್ಗಾಂವ್ ನ ನಿವಾಸಿ ದಲ್ಪ್ರೀತ್ ಕೂಡಾ ತನ್ನ ಅಫಿಡವಿಟ್ನಲ್ಲಿ ಸ್ವ ಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ತನಗೆ ರಕ್ಷಣೆ ನೀಡುವಂತೆಯೂ ಅವರು ನ್ಯಾಯಾಲಯವನ್ನು ಕೋರಿದ್ದರು ಎಂದು ವರದಿ ತಿಳಿಸಿದೆ.







