ಅಭಿವೃದ್ಧಿ ಕೆಲಸಗಳು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಿ: ಸಂಸದೆ ಸುಮಲತಾ ಸೂಚನೆ

ಮಂಡ್ಯ, ಜು.3: ಎಲ್ಲಾ ಇಲಾಖೆಗಳು ಕೇಂದ್ರವಲಯದ ಯೋಜನೆಗಳ ಅನುದಾನವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಕೆಲಸಗಳು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸಿ ಎಂದು ಅಧಿಕಾರಿಗಳಿಗೆ ಸಂಸದೆ ಸುಮಲತಾ ಅಂಬರೀಶ್ ಸೂಚಿಸಿದರು.
ಜಿಲ್ಲಾಪಂಚಾಯತ್ ಕಛೇರಿಯ ಕಾವೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಮತ್ತು ಕೇಂದ್ರ ವಲಯ ಅಥವಾ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಿಎಂ ಕಿಸಾನ್ ಯೋಜನೆ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗಿ ಎಂದರು.
ಕೆ.ಆರ್.ಎಸ್. ಡ್ಯಾಂ ಸುತ್ತಲಿನ ಶ್ರೀರಂಗಪಟ್ಟಣ-ಪಾಂಡವಪುರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಕ್ರಮವಹಿಸಿ. ಯಾವುದೇ ಕಾರಣಕ್ಕೂ ಜಲಾಶಯಕ್ಕೆ ತೊಂದರೆಯಾಗಬಾರದು ಎಂದು ಹೇಳಿದರು.
ಕೊರೋನ ಗೆಲ್ಲೋಣ ಜಾಗೃತಿ ಗೀತೆ ನಿರ್ಮಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗೆ ಅಭಿನಂದನೆ ತಿಳಿಸಿದರು.
ಗ್ರಾಮ ನೈರ್ಮಲ್ಯ ಸಂಬಂಧಿಸಿದ ಕೈಪಿಡಿ ಹಾಗೂ ಮಾಹಿತಿ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ. ಪಂ ಸಿ ಇ ಒ ದಿವ್ಯಪ್ರಭು, ಎಸ್ಸಿ ಡಾ.ಅಶ್ವಿನಿ, ಉಪವಿಭಾಗಾಧಿಕಾರಿ ಐಶ್ವರ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ ಉಪಸ್ಥಿತರಿದ್ದರು.







