ವಾರ್ತಾಭಾರತಿ ವರದಿ ಫಲಶೃತಿ: ಅರ್ಚಕ ವೆಂಕಟೇಶ್ ಭಟ್ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ನೀಡಲು ಎಸಿ ಸೂಚನೆ
ಅತಿವೃಷ್ಟಿಯಿಂದ ಹಾನಿಗೀಡಾಗಿದ್ದ ಮನೆಗೆ 50 ಸಾವಿರ ರೂ. ಪರಿಹಾರ ನೀಡಿದ್ದ ಕಂದಾಯಾಧಿಕಾರಿಗಳು

ಚಿಕ್ಕಮಗಳೂರು, ಜು.3: ಕಳಸ ತಾಲೂಕು ವ್ಯಾಪ್ತಿಯ ಹಿರೇಬೈಲು ಗ್ರಾಮದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಿದ್ದ ಅರ್ಚಕ ವೆಂಕಟೇಶ್ ಭಟ್ ಎಂಬವರ ಮನೆಗೆ ಸ್ಥಳೀಯ ಕಂದಾಯಾಧಿಕಾರಿಗಳು 5 ಲಕ್ಷ ರೂ. ಪರಿಹಾರಕ್ಕೆ ವರದಿ ಸಲ್ಲಿಸಿ ಕೇವಲ 50 ಸಾವಿರ ರೂ. ನೀಡಿದ್ದ ಪ್ರಕರಣ ಸಂಬಂಧ ವಾರ್ತಾಭಾರತಿ ವರದಿ ಪ್ರಕಟಿಸಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ್ದ ಕಂದಾಯ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್, ಸಂತ್ರಸ್ಥ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಆರ್‍ಐ ಹಾಗೂ ವಿಎಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಕಳಸ ಸಮೀಪದ ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಿರೇಬೈಲು ಗ್ರಾಮಕ್ಕೆ ಭೇಟಿ ನೀಡಿದ್ದ ಚಿಕ್ಕಮಗಳೂರು ಕಂದಾಯ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಅವರು ಶುಕ್ರವಾರ ವೆಂಕಟೇಶ್ ಭಟ್ ಅವರಿಂದ ಮಾಹಿತಿ ಪಡೆದುಕೊಂಡು ನಂತರ ಕಳಸ ನಾಡಕಚೇರಿಯ ಆರ್‍ಐ ಹಾಗೂ ವಿಎ ಅವರ ಯಡವಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ವೆಂಕಟೇಶ್ ಭಟ್ ಅವರು ಹೊಸ ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಪರಿಹಾರ ನೀಡಲು ಅಗತ್ಯವಿರುವ ಕ್ರಮವಹಿಸಬೇಕೆಂದು ಸ್ಥಳದಲ್ಲೇ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ನಂತರ ಚೆನ್ನಡ್ಲು ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಅತಿವೃಷ್ಟಿಯಿಂದ ನಿರಾಶ್ರಿತರಾಗಿದ್ದ 17 ಕುಟುಂಬಗಳಿಗೆ ನಿವೇಶನ ನೀಡಲು ಗುರುತಿಸಿದ್ದ 2.10 ಎಕರೆ ಜಾಗವನ್ನು ಪರಿಶೀಲಿಸಿದ ಅವರು, ಎಲ್ಲ ಸಂತ್ರಸ್ಥರಿಗೆ ಸರಕಾರ ಸೂಚಿಸಿರುವ ನಿಗದಿತ ಅಳತೆ ನಿವೇಶನವನ್ನು ಶೀಘ್ರವೇ ಹಂಚಿಕೆ ಮಾಡಬೇಕೆಂದು ಕಂದಾಯಾಧಿಕಾರಿಗಳಿಗೆ ಸೂಚಿಸಿದ ಅವರು, ಸಂತ್ರಸ್ಥರಿಗೆ ಮುಂದಿನ 15 ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು. ಸಂತ್ರಸ್ಥರು ಎಷ್ಟು ಬೇಗ ಮನೆ ನಿರ್ಮಿಸಿಕೊಳ್ಳುತ್ತಾರೋ ಅಷ್ಟು ಬೇಗ ಸಂತ್ರಸ್ಥರ ಮನೆ ನಿರ್ಮಾಣದ ಹಣ ಬಿಡುಗಡೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಕಂದಾಯಾಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದಾರೆ.
ಈ ವೇಳೆ ಗ್ರಾಪಂ ಸದಸ್ಯ ವಿನ್ಸೆಂಟ್ ಫುರ್ಟಾಡೋ, ಜೆಡಿಎಸ್ ಮುಖಂಡ ರವಿ ರೈ, ಚೆನ್ನಡ್ಲು ಸಂತ್ರಸ್ಥರ ಹೋರಾಟ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಸಂತ್ರಸ್ಥರಾದ ದೂಜಾ, ಸುರೇಶ್, ಅವಿನಾಶ್ ಸೇರಿದಂತೆ ಸ್ಥಳೀಯ ಗ್ರಾಪಂ ಪಿಡಿಒ ಉಪಸ್ಥಿತರಿದ್ದರು.







