ಶಿವಮೊಗ್ಗ ಜಿಪಂ ಕ್ಷೇತ್ರಗಳ ಮೀಸಲಾತಿ ಬದಲಿಸಿ ಚುನಾವಣೆ: ಘಟಾನುಘಟಿಗಳಿಗೆ ಕೈ ತಪ್ಪಿದ ಕ್ಷೇತ್ರ
ಶಿವಮೊಗ್ಗ, ಜು. 3: ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲು ಬದಲಿಸಿ ಚುನಾವಣೆ ಆಯೋಗವು ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. ಇದರಿಂದಾಗಿ ಶೇ.80-90ರಷ್ಟು ಕ್ಷೇತ್ರಗಳಲ್ಲಿ ಈಗಿರುವ ಸದಸ್ಯರಿಗೆ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ. ಜೊತೆಗೆ ಜಿಪಂನ ಹಲವು ಹಾಲಿ ಸದಸ್ಯರು ಸ್ಪರ್ಧೆಯ ಅವಕಾಶವನ್ನೇ ಕಳೆದುಕೊಳ್ಳಲಿದ್ದಾರೆ.
ಘಟಾನುಘಟಿಗಳ ಕ್ಷೇತ್ರದಲ್ಲೂ ಮೀಸಲಾತಿ ಬದಲಾಗಿದ್ದು, ಅವರು ಬೇರೆಯ ಕ್ಷೇತ್ರದಿಂದ ಸ್ಪರ್ಧಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಜಿಪಂ ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ಎಸ್.ಪ್ರಕಾಶ್ ಅವರಿಗೂ ಕ್ಷೇತ್ರ ಕೈ ತಪ್ಪಿದೆ. ಈ ಹಿಂದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರವು ಎಸ್ಸಿ ಮಹಿಳೆಯ ಪಾಲಾಗಿದೆ. ಹೀಗಾಗಿ, ಜ್ಯೋತಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಪ್ರತಿನಿಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ಅದೇ ರೀತಿ, ನಿಕಟ ಪೂರ್ವ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಅವರು ಪ್ರತಿನಿಧಿಸಿದ್ದ ಹಸೂಡಿ ಕ್ಷೇತ್ರ ಈ ಹಿಂದೆ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈಗ ಸಾಮಾನ್ಯ ವರ್ಗಕ್ಕೆ ನೀಡಲಾಗಿದೆ. ಹೀಗಾಗಿ, ಈ ಕ್ಷೇತ್ರದಿಂದ ವಿಜಯ್ ಕುಮಾರ್ (ಧನ್ನಿ) ಅವರು ಸ್ಪರ್ಧಿಸುವ ಸಾಧ್ಯತೆ ಇದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಈ. ಕಾಂತೇಶ್ ಅವರು ಪ್ರತಿನಿಧಿಸುತ್ತಿದ್ದ ಹೊಳಲೂರು ಕ್ಷೇತ್ರವು ಸಾಮಾನ್ಯ ಮಹಿಳೆಗೆ ಮೀಸಲು ಇಡಲಾಗಿದೆ. ಹೀಗಾಗಿ, ಅವರು ಮತ್ತೊಮ್ಮೆ ಇದೇ ಕ್ಷೇತ್ರದಿಂದ ಕಣಕ್ಕಿಳಿಯುವಂತಿಲ್ಲ. ಬದಲಿಗೆ ಬೇರೆ ಕ್ಷೇತ್ರದ ಕಡೆಗೆ ಮುಖ ಮಾಡುವಂತಾಗಿದೆ. ಕಲಗೋಡು ರತ್ನಾಕರ್ ಅವರಿಗೂ ಕ್ಷೇತ್ರ ಇಲ್ಲವಾಗಿದೆ. ಆದರೆ, ಈ ಹಿಂದೆ ಪ್ರತಿನಿಧಿಸಿದ್ದ ರಿಪ್ಪನ್‌ಪೇಟೆ ಕ್ಷೇತ್ರ ಸಾಮಾನ್ಯ ವರ್ಗದ ಪಾಲಾಗಿರುವುದರಿಂದ ಬಂಡಿರಾಮಚಂದ್ರ ಹಾಗೂ ರತ್ನಾಕರ್ ನಡುವೆ ಟಿಕೆಟ್ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ.
ಹುಂಚ ಕ್ಷೇತ್ರವು ಬಿಸಿಎಂ-ಎ ಮಹಿಳೆಗೆ ಮೀಸಲಿಟ್ಟಿದ್ದು, ಶ್ವೇತಾ ಬಂಡಿ ಅವರಿಗೆ ಸ್ಪರ್ಧೆಯ ಅವಕಾಶ ಇದೆ. ನಗರ ಕ್ಷೇತ್ರವನ್ನು ಎಸ್ಸಿ ಮಹಿಳೆಗೆ ಮೀಸಲು ಇಟ್ಟಿದ್ದು, ಸುರೇಶ್ ಸ್ವಾಮಿರಾವ್ ಅವರಿಗೆ ಕ್ಷೇತ್ರವೇ ಇಲ್ಲದಂತಾಗಿದೆ. ಬಿಜೆಪಿ ನಾಯಕ ಭಾನುಪ್ರಕಾಶ್ ಅವರ ಪುತ್ರ ಕಣ್ಣು ಇಟ್ಟಿದ್ದರೆನ್ನಲಾದ ಗಾಜನೂರು ಕ್ಷೇತ್ರ ಎಸ್ಸಿ ಮಹಿಳೆಯ ಪಾಲಾಗಿದ್ದು, ಅವರಿಗೂ ನಿರಾಸೆಯಾಗಿದೆ.ಅದೇ ರೀತಿ, ಹಾರನಹಳ್ಳಿಯಲ್ಲೂ ಅಭ್ಯರ್ಥಿಗಳಿಗೆ ಇದೇ ರೀತಿಯ ಸಮಸ್ಯೆಯಾಗಿದ್ದು, ಅವರು ಬೇರೆಯ ಕ್ಷೇತ್ರಕ್ಕೆ ವಲಸೆ ಹೋಗುವಂತಾಗಿದೆ.
ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸನಗರ ಕ್ಷೇತ್ರವು ವಿಲೀನಗೊಂಡ ಪರಿಣಾಮ ಕಲಗೋಡು ರತ್ನಾಕರ್ ಅವರಿಗೆ ಕ್ಷೇತ್ರ ಬದಲಿಸುವ ಸವಾಲು ಎದುರಾಗಿದೆ. ಆನವೇರಿ ಕ್ಷೇತ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ವೀರಭದ್ರ ಪೂಜಾರಿ ಅವರು ಅದೇ ಕ್ಷೇತ್ರದಿಂದ ಪುನರ್ ಸ್ಪರ್ಧಿಸುವ ಅವಕಾಶವಿದೆ.
ಲಿಂಗಾಪುರ ಕ್ಷೇತ್ರವು ಬಿಸಿಎಂ-ಎ ಮಹಿಳೆಗೆ ಮೀಸಲಾಗಿರುವ ಕಾರಣ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕಾಸರವಳ್ಳಿ ಶ್ರೀನಿವಾಸ್ ಅವರಿಗೆ ಅವಕಾಶ ಕೈತಪ್ಪಿದೆ. ಜಿಪಂ ಹಿಂದೆ ಕೂಡ್ಲಿಗೆರೆಯಿಂದ ಪ್ರತಿನಿಧಿಸಿದ ಮಣಿಶೇಖರ್, ಸಿಂಗನಮನೆ ಕ್ಷೇತ್ರ ಜೆ.ಪಿ.ಯೋಗೇಶ್ ಅವರು ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ.







