ಉತ್ತರಪ್ರದೇಶ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಗೆಲುವು, ಅಖಿಲೇಶ್ ಯಾದವ್ ಗೆ ಹಿನ್ನಡೆ

ಲಕ್ನೊ: ಉತ್ತರಪ್ರದೇಶದಲ್ಲಿ ಶನಿವಾರ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಭಾರೀ ಜಯ ಸಾಧಿಸಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಭಾರೀ ಹಿನ್ನಡೆ ಕಂಡಿದೆ.
75 ಸ್ಥಾನಗಳಿಗೆ ನಡೆದ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ 67 ಸ್ಥಾನಗಳನ್ನು ಪಡೆದುಕೊಂಡಿತು. ಯಾದವ್ ಅವರ ಪಕ್ಷ ಕೇವಲ ಐದು ಸ್ಥಾನಗಳನ್ನು ಗೆದ್ದಿದೆ. ರಾಷ್ಟ್ರೀಯ ಲೋಕ ದಳ, ಜನಸತ್ತದಳ ಹಾಗೂ ತ್ತು ಸ್ವತಂತ್ರ ಅಭ್ಯರ್ಥಿ ತಲಾ ಒಂದು ಸ್ಥಾನ ಗೆದ್ದರು.
2016 ರಲ್ಲಿ ನಡೆದಿದ್ದ ಇದೇ ಚುನಾವಣೆಯಲ್ಲಿ, ಯಾದವ್ ಅವರ ಪಕ್ಷವು 75 ಸ್ಥಾನಗಳಲ್ಲಿ 60 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದಾಗ್ಯೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಯಾವುದೇ ದಿಕ್ಸೂಚಿಯಾಗುವ ಸಂಭವವಿಲ್ಲ ಎಂದು ಚುನಾವಣಾ ವಿಶ್ಲೇಷಕರು ಹೇಳಿದ್ದಾರೆ.
ಪ್ರಯಾಗ್ ರಾಜ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಶನಿವಾರ ಸಮಾಜವಾದಿ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ಇಪ್ಪತ್ತೊಂದು ಬಿಜೆಪಿ ಅಭ್ಯರ್ಥಿಗಳು ಹಾಗೂ ಸಮಾಜವಾದಿ ಪಕ್ಷದ ಒಬ್ಬರು ಈ ಹಿಂದೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸುಮಾರು 3,000 ಜಿಲ್ಲಾ ಪಂಚಾಯತ್ ಸದಸ್ಯರಿದ್ದಾರೆ. ಈ ಚುನಾವಣೆಯು ರಾಜ್ಯದ 75 ಜಿಲ್ಲೆಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ.
ಮಾಯಾವತಿಯ ಬಹುಜನ ಸಮಾಜ ಪಕ್ಷವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.







