ಜನಪ್ರತಿನಿಧಿಗಳು ಅವಧಿಗೆ ಮುನ್ನ ರಾಜೀನಾಮೆ ನೀಡಿದ್ದಲ್ಲಿ ಚುನಾವಣಾ ವೆಚ್ಚವನ್ನು ಅವರಿಂದಲೇ ಭರಿಸಬೇಕು: ಭೀಮಪ್ಪ ಒತ್ತಾಯ
ಬೆಂಗಳೂರು/ ಬೆಳಗಾವಿ, ಜು.4: ಜನಪ್ರತಿನಿಧಿಗಳು ಅಕಾಲಿಕ ನಿಧನ ಹಿನ್ನೆಲೆ ಯಾವುದೇ ಸ್ಥಾನ ತೆರವಾದರೆ ಮಾತ್ರ ಸರಕಾರ ಚುನಾವಣೆ ವೆಚ್ಚ ಭರಿಸಲಿ. ಆದರೆ, ಮನಸೊ ಇಚ್ಛೆ ವೈಯಕ್ತಿಕ ಹಿತಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ಎದುರಾಗುವಂತೆ ಮಾಡುವ ಜನಪ್ರತಿನಿಧಿಗಳಿಂದ ಸರಕಾರ ಚುನಾವಣಾ ವೆಚ್ಚವನ್ನು ಭರಿಸಿಕೊಳ್ಳುವ ನೂತನ ಕಾನೂನು ಜಾರಿಗೆ ತರಬೇಕು ಎಂದು ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ.
ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿಯವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ನಡೆದದ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ 13.54 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಇದು ಸಾರ್ವಜನಿಕರ ತೆರಿಗೆ ರೂಪದಲ್ಲಿ ಸಂಗ್ರಹವಾಗಿದ್ದ ಹಣವನ್ನು ನೀರಿನಲ್ಲಿ ಪೋಲು ಮಾಡಿದಂತಾಗಿದೆ ಎಂದು ಅವರು ದೂರಿದ್ದಾರೆ.
ಯಾವುದೇ ಪ್ರತಿನಿಧಿಗಳು ಅವಧಿಗೆ ಮುನ್ನ ರಾಜೀನಾಮೆ ನೀಡಿದ್ದಲ್ಲಿ ಚುನಾವಣೆಗೆ ತಗಲುವ ವೆಚ್ಚವನ್ನು ಅವರಿಂದಲೇ ಭರಿಸಬೇಕು. 13.54 ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಒಂದು ಕ್ಷೇತ್ರದ ಉಪ ಚುನಾವಣೆಗೆ ವೆಚ್ಚ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ಮತಗಟ್ಟೆಗಳಿಗೂ ಎಲ್ಲ ಸೌಕರ್ಯ ಜೊತೆಗೆ ಎಲ್ಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದರೂ, ಲೋಕಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗಳಿಗೆ ತಲಾ 33 ಸಾವಿರ ರೂ.ವನ್ನು ಜಿಲ್ಲಾಡಳಿತ ಏಕೆ ಬಿಡುಗಡೆ ಮಾಡಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ಭೀಮಪ್ಪ ಗಡಾದ ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ ನಿರ್ಮಿತಿ ಕೇಂದ್ರದ ಹೆಸರಿನಲ್ಲಿ 1 ಕೋಟಿ ರೂ. ನೀಡಿದ್ದು, ಈ ಹಣದಲ್ಲಿ ಎಲ್ಲಿ ಯಾವ ಕಾರ್ಯ ಮಾಡಿದ್ದಾರೆ ಎನ್ನುವುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂದು ಅವರು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.







