ಉತ್ತರಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ: ಮತದಾರರನ್ನು ಬಿಜೆಪಿ ಅಪಹರಿಸಿದೆ ಎಂದ ಅಖಿಲೇಶ್ ಯಾದವ್

ಲಕ್ನೋ: ಜಿಲ್ಲಾ ಪಂಚಾಯತ್ ಮುಖ್ಯಸ್ಥರ ಹುದ್ದೆಗಳಿಗೆ ನಡೆದ ಚುನಾವಣೆಯನ್ನು ಆಡಳಿತ ಪಕ್ಷ ಬಿಜೆಪಿ ಅಪಹಾಸ್ಯ ಮಾಡಿದೆ. ಬಿಜೆಪಿ ಮತದಾರರನ್ನು ಅಪಹರಿಸಿದೆ ಹಾಗೂ ಮತ ಚಲಾಯಿಸುವುದನ್ನು ತಡೆಯಲು 'ಸಶಸ್ತ್ರ ಪಡೆಗಳನ್ನು' ಬಳಸಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಆರೋಪಿಸಿದರು.
ಶನಿವಾರ ನಡೆದ ಚುನಾವಣೆಗಳಲ್ಲಿ 75 ಸ್ಥಾನಗಳಲ್ಲಿ 67 ಸ್ಥಾನಗಳಲ್ಲಿ ತನ್ನ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಹೇಳಿಕೊಂಡಿದೆ.
"ತನ್ನ ಸೋಲನ್ನು ವಿಜಯವಾಗಿ ಪರಿವರ್ತಿಸಲು, ಬಿಜೆಪಿ ಮತದಾರರನ್ನು ಅಪಹರಿಸಿದೆ. ಪೊಲೀಸ್ ಹಾಗೂ ಆಡಳಿತದ ಸಹಾಯದಿಂದ ಬಲವಂತವಾಗಿ ಮತ ಚಲಾಯಿಸುವುದನ್ನು ತಡೆದಿದೆ" ಎಂದು ಎಸ್ಪಿ ಮುಖ್ಯಸ್ಥರು ಆರೋಪಿಸಿದ್ದಾರೆ.
ಬಿಜೆಪಿ ಎಲ್ಲಾ ಪ್ರಜಾಪ್ರಭುತ್ವದ ನಿಯಮಗಳನ್ನು ಅಪಹಾಸ್ಯ ಮಾಡಿದೆ. ನಾನು ಇದನ್ನು ಈ ಹಿಂದೆ ನೋಡಿಲ್ಲ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯರ ಚುನಾವಣೆಯಲ್ಲಿ ಹೆಚ್ಚಿನ ಫಲಿತಾಂಶಗಳು ಎಸ್‌ಪಿ ಪರವಾಗಿದ್ದರೆ, ಜಿಲ್ಲಾ ಪಂಚಾಯತ್ ಮುಖ್ಯಸ್ಥರ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ್ದು ವಿಚಿತ್ರ. ರಾಜ್ಯ ಚುನಾವಣಾ ಆಯುಕ್ತರಿಗೆ ಜ್ಞಾಪಕ ಪತ್ರ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ಆಡಳಿತ ಪಕ್ಷದ "ಸರ್ವಾಧಿಕಾರ" ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಪರ ಸದಸ್ಯ ಅರುಣ್ ರಾವತ್ ಅವರನ್ನು ಲಕ್ನೋದಲ್ಲಿ ಅಪಹರಿಸಲಾಗಿದೆ. ಎಸ್‌ಪಿ ಅಭ್ಯರ್ಥಿ ವಿಜಯ್ ಲಕ್ಷ್ಮಿಯನ್ನು ಡಿಎಂ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದ್ದು, ಅವರ ಪತಿ ಶಾಸಕ ಅಂಬರೀಶ್ ಪುಷ್ಕರ್ ಅವರನ್ನು ಭೇಟಿಯಾಗದಂತೆ ತಡೆಯಲಾಗಿದೆ ಎಂದು ಪ್ರಕರಣಗಳನ್ನು ಉಲ್ಲೇಖಿಸಿ ಯಾದವ್ ಆರೋಪಿಸಿದ್ದಾರೆ.







