3 ತಿಂಗಳೊಳಗೆ ಶೇ.80 ಜನರಿಗೆ ಕೋವಿಡ್ ಲಸಿಕೆ ಹಾಕಿಸಿ, 3ನೇ ಅಲೆಯಿಂದ ರಕ್ಷಿಸಿ: ಡಿಕೆಶಿ ಒತ್ತಾಯ

ಬೆಂಗಳೂರು, ಜು.4: ಕೋವಿಡ್ 3ನೇ ಅಲೆಯಿಂದ ಜನರನ್ನು ರಕ್ಷಿಸಲು ಸೆಪ್ಟಂಬರ್ ಅಂತ್ಯದೊಳಗೆ ರಾಜ್ಯದ ಶೇ.80 ಜನರಿಗೆ ಲಸಿಕೆ ಹಾಕುವ ಸವಾಲಿಗೆ ಸಿದ್ಧವಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ''ಮೂರು ತಿಂಗಳೊಳಗೆ ರಾಜ್ಯದ ಶೇಕಡ 80 ವಯಸ್ಕರಿಗೆ ಎರಡು ಡೋಸ್ ಲಸಿಕೆ ಹಾಕಿದರೆ ಕೊರೋನ 3ನೇ ಅಲೆಯಿಂದ ರಾಜ್ಯದ ರಕ್ಷಣೆ ಮಾಡಬಹುದಾಗಿದೆ'' ಎಂದು ಹೇಳಿದರು.
''ಅಕ್ಟೋಬರ್ ತಿಂಗಳಲ್ಲಿ ಕೊರೊನಾ 3ನೇ ಅಲೆ ತೀವ್ರವಾಗುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ವ್ಯಾಕ್ಸಿನೇಷನ್ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ಶೇ.80 ವಯಸ್ಕರಿಗೆ ಸೆಪ್ಟಂಬರ್ 30ರೊಳಗೆ ಎರಡು ಡೋಸ್ ಲಸಿಕೆ ನೀಡಿದರೆ 3ನೇ ಅಲೆಯಿಂದ ರಕ್ಷಣೆ ಪಡೆಯಬಹುದು ಮತ್ತು ಅದರ ತೀವ್ರತೆ ತಡೆಯಬಹುದು. ಅದಕ್ಕಾಗಿಯೇ ಈ ಸವಾಲಿಗೆ ಸರ್ಕಾರ ಸಿದ್ದವಿದೆಯೇ? ಎಂದು ಪ್ರಶ್ನೆ ಮಾಡುತ್ತಿದ್ದೇನೆ'' ಎಂದರು.
ಈ ಸವಾಲು ಅಸಾಧ್ಯವಾದುದೇನೂ ಅಲ್ಲ. ವಿದೇಶಗಳಿಗೆ ಲಸಿಕೆ ಕಳಿಸುವುದನ್ನು ತಗ್ಗಿಸಿ ನಮ್ಮ ಜನರಿಗೆ ವ್ಯಾಕ್ಸಿನೇಷನ್ ಮಾಡಲು ಒತ್ತು ಕೊಡಬೇಕು ಎಂದವರು ಹೇಳಿದರು.
''ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅವಶ್ಯಕ ಪ್ರಮಾಣದ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವ್ಯಾಕ್ಸಿನೇಷನ್ ಬಗ್ಗೆ ಒಂದು ದಿನದ ಅಬ್ಬರದ ಪ್ರಚಾರ ಪಡೆದು ಸರ್ಕಾರ ಸುಮ್ಮನಾದರೆ ಹೇಗೆ? ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಿದೆ. ಲಸಿಕೆ ಹಾಕುವಲ್ಲಿ ಉತ್ತರ ಕರ್ನಾಟಕದ ಜನರನ್ನು ಮಲತಾಯಿ ಮಕ್ಕಳಂತೆ ನೋಡಲಾಗುತ್ತಿದೆ. ಬೆಂಗಳೂರು ನಗರದಲ್ಲೂ ಲಸಿಕೆ ದಾಸ್ತಾನು ಕೊರತೆಯಿದೆ. ಅವಶ್ಯಕ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗಿಲ್ಲವಾದ ಕಾರಣ ದಿಲ್ಲಿಗೆ ಹೋಗುವುದಾಗಿ ಆರೋಗ್ಯ ಸಚಿವರು ಹೇಳುತ್ತಿದ್ದಾರೆ. ಈ ಸರ್ಕಾರ ಈಗಲಾದರೂ ಎಚ್ಚೆತ್ತು ಬದ್ದತೆಯಿಂದ ಕೆಲಸ ಮಾಡುತ್ತಾ ನೋಡೋಣ'' ಎಂದು ಶಿವಕುಮಾರ್ ಹೇಳಿದರು.
''ಡೆಲ್ಟಾ ರೂಪಾಂತರಿ ವೈರಾಣು ವಿರುದ್ದ ರಕ್ಷಣೆಗಾಗಿ ಕೋವಿಶೀಲ್ಡ್ 2 ನೇ ಲಸಿಕೆಯನ್ನು 8 ವಾರಗಳೊಳಗೆ ಕೊಡಬೇಕು. ಅದಕ್ಕಾಗಿ ಸರ್ಕಾರ ಮಾರ್ಗಸೂಚಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲಿ'' ಎಂದು ಸಲಹೆ ಮಾಡಿದರು.
'' ಕಾಂಗ್ರೆಸ್ ಪಕ್ಷದ ನಾಯಕರು ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನೇಷನ್ ಶಿಬಿರಗಳನ್ನು ನಡೆಸಿ, 1 ಲಕ್ಷ ಮಂದಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ. ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಲು ಅನುಮತಿ ಕೇಳಿದರೂ ಸರ್ಕಾರ ಕೊಡಲಿಲ್ಲ. ಈ ಉದ್ದೇಶಕ್ಕೆ ಶಾಸಕರ ನಿಧಿ ಬಳಸುವ ಸದಾಶಯಕ್ಕೆ ಸರ್ಕಾರ ಸಮ್ಮತಿಸಲಿಲ್ಲ. ನಮ್ಮ ಸಹಾಯ ಅಗತ್ಯವಿಲ್ಲ ಎಂದರೆ ತೊಂದರೆ ಇಲ್ಲ. ಕಾಲಮಿತಿಯಲ್ಲಿ ಸರ್ಕಾರ ತ್ವರಿತವಾಗಿ ಎಲ್ಲರಿಗೂ ಲಸಿಕೆ ಹಾಕಿಸಿ, ಜನರನ್ನು ರಕ್ಷಣೆ ಮಾಡಲಿ'' ಎಂದು ಶಿವಕುಮಾರ್ ಹೇಳಿದರು.
ಲಸಿಕೆ ಹಾಕಿಸಿಕೊಳ್ಳುವ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಕೆಪಿಸಿಸಿ ಮಕ್ಕಳಿಗಾಗಿ ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ ನಡೆಸಿದೆ. ವಯಸ್ಕರು ವ್ಯಾಕ್ಸಿನ್ ಪಡೆಯಲು ಪ್ರೇರಣೆಯಾಗುವಂತೆ 20 ಸಾವಿರಕ್ಕೂ ಹೆಚ್ಚು ಮಕ್ಕಳು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ವಿಡಿಯೋ ಮಾಡಿದ 22 ಮಕ್ಕಳಿಗೆ ಆ್ಯಂಡ್ರಾಯ್ಡ್ ಟ್ಯಾಬ್ ಗಳನ್ನು ಬಹುಮಾನವಾಗಿ ಪಕ್ಷದ ವತಿಯಿಂದ ನೀಡಲಾಗಿದೆ. ನಾವಂತೂ ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸುತ್ತಿದ್ದೇವೆ. ಆದರೆ, ಲಸಿಕೆ ದಾಸ್ತಾನು ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ. ಆಡಳಿತ ನಡೆಸುವವರು ಎಚ್ಚೆತ್ತುಕೊಂಡು ಕೆಲಸ ಮಾಡಲಿ'' ಎಂದು ಕಿವಿಮಾತು ಹೇಳಿದರು.







