ಪೆಟ್ರೋಲ್ ,ಡೀಸೆಲ್ ದರ ಕಳೆದ 2 ತಿಂಗಳಲ್ಲಿ ಶೇ.10 ರಷ್ಟು ಹೆಚ್ಚಳ

ಹೊಸದಿಲ್ಲಿ: ಸರಕಾರಿ ತೈಲ ಕಂಪನಿಗಳು ಎರಡು ತಿಂಗಳ ಅವಧಿಯಲ್ಲಿ 34ನೇ ಬಾರಿ ಇಂಧನ ದರ ಏರಿಕೆ ಮಾಡಿವೆ. ರವಿವಾರ ಪೆಟ್ರೋಲ್ ಬೆಲೆಯನ್ನು 35 ಪೈಸೆ ಹಾಗೂ ಡೀಸೆಲ್ ಅನ್ನು 18 ಪೈಸೆ ಹೆಚ್ಚಿಸಲಾಗಿದೆ. ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶ ಘೋಷಣೆಯಾದ ಒಂದು ದಿನದ ನಂತರ ಮೇ 4 ರಿಂದ ಎರಡು ಇಂಧನಗಳ ಬೆಲೆ ಶೇಕಡಾ 10 ಕ್ಕಿಂತ ಹೆಚ್ಚು ದುಬಾರಿಯಾಗಿವೆ.
ಆಟೋ ಇಂಧನಗಳ ಚಿಲ್ಲರೆ ದರಗಳು ಮೇ 4 ರಿಂದ ಏರಿಕೆಯಾಗುತ್ತಿದ್ದು ಇದರ ಪರಿಣಾಮವಾಗಿ ಪೆಟ್ರೋಲ್‌ನಲ್ಲಿ ಶೇ. 10.07 (ಪ್ರತಿ ಲೀಟರ್‌ಗೆ ರೂ. 9.11 ) ಹಾಗೂ ಡೀಸೆಲ್ ಬೆಲೆಯಲ್ಲಿ ಶೇ. 10.68 (ಲೀಟರ್‌ಗೆ ರೂ. 8.63 ) ಏರಿಕೆಯಾಗಿದೆ,
ಇತ್ತೀಚಿನ ಏರಿಕೆಯೊಂದಿಗೆ ದಿಲ್ಲಿ ಹಾಗೂ ಕೋಲ್ಕತ್ತಾದ ಪೆಟ್ರೋಲ್ ದರಗಳು ಲೀಟರ್‌ಗೆ ರೂ. 100 ಅಂಚಿಗೆ ತಲುಪಿದ್ದು ಕ್ರಮವಾಗಿ ಲೀಟರ್ ಗೆ ರೂ. 99.51 ಹಾಗೂ ರೂ. 99.45 ಕ್ಕೆ ತಲುಪಿದೆ. ದಿಲ್ಲಿ ಹಾಗೂ ಕೋಲ್ಕತ್ತಾದಲ್ಲಿ ಹೊಸ ಡೀಸೆಲ್ ದರ ಕ್ರಮವಾಗಿ ಲೀಟರ್‌ಗೆ ರೂ. 89.36 ಮತ್ತು ರೂ. 92.27 ಆಗಿದೆ.
ದಿಲ್ಲಿಯಲ್ಲಿ ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ (ಐಒಸಿ) ಇಂಧನ ದರಗಳು ಇಡೀ ದೇಶಕ್ಕೆ ಮಾನದಂಡವಾಗಿದ್ದರೆ ರಾಜ್ಯ ತೆರಿಗೆಗಳು ಹಾಗೂ ಸ್ಥಳೀಯ ಸುಂಕಗಳಲ್ಲಿನ ವ್ಯತ್ಯಾಸಗಳಿಂದಾಗಿ ಎರಡು ಇಂಧನಗಳ ಚಿಲ್ಲರೆ ಬೆಲೆಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ.
ಆದಾಗ್ಯೂ, ಮುಂಬೈ, ಚೆನ್ನೈ ಹಾಗೂ ಬೆಂಗಳೂರು ಮೂರು ಮಹಾನಗರಗಳಲ್ಲಿ ಪೆಟ್ರೋಲ್ ದರ ರೂ. 100 ಗಡಿ ದಾಟಿದೆ.
ರಾಜಸ್ಥಾನದ ಗಂಗನಗರದಲ್ಲಿ ಅತಿ ಹೆಚ್ಚು ಇಂಧನ ದರಗಳು ದಾಖಲಾಗಿವೆ, ಅಲ್ಲಿ ಪಂಪ್‌ಗಳು ಪೆಟ್ರೋಲ್ ಅನ್ನು ಲೀಟರ್‌ಗೆ ರೂ.110.77 ಮತ್ತು ಡೀಸೆಲ್ ಅನ್ನು ಲೀಟರ್‌ಗೆ ರೂ.102.60 ಕ್ಕೆ ಮಾರಾಟ ಮಾಡುತ್ತಿವೆ.







