ಡಾ. ಜಿ.ಕೆ. ಭಟ್ ಗೆ ರಾಜ್ಯ ಐಎಂಎ ಪ್ರಶಸ್ತಿ

ಮಂಗಳೂರು : ನಗರದ ಹಿರಿಯ ವೈದ್ಯ ಡಾ. ಜಿ.ಕೆ. ಭಟ್ ಸಂಕಬಿತ್ತಿಲು ಅವರನ್ನು ವೈದ್ಯರ ದಿನಾಚರಣೆಯಂದು ರಾಜ್ಯ ಐಎಂಎ ವತಿಯಿಂದ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ.ಬಿ.ಸಿ.ರಾಯ್ ಜನ್ಮದಿನದಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಡಾ.ಸುಧಾಕರ್ ಮತ್ತು ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೇದ್ ಅಖ್ತರ್ ಸನ್ಮಾನ ನೆರವೇರಿಸಿದರು. ಕಳೆದ ನಲುವತ್ತೊಂದು ವರ್ಷಗಳಿಂದ ಅವರು ಪಡೀಲಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ಜನಾನುರಾಗಿ ಕುಟುಂಬ ವೈದ್ಯ ಎನಿಸಿಕೊಂಡಿದ್ದಾರೆ.
ವೈದ್ಯ ವೃತ್ತಿಯ ಜತೆಗೆ ವೈದ್ಯರ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅವರು, ಕರ್ನಾಟಕ ಖಾಸಗಿ ವೈದ್ಯಕೀಯ ನೋಂದಣಿ ಪ್ರಾಧಿಕಾರದ ಆಸ್ಪತ್ರೆಗಳ ನೋಂದಣಿ ಸದಸ್ಯರಾಗಿ ಎಂಟು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಕುಟುಂಬ ವೈದ್ಯರ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷರಾಗಿ, ಮಂಗಳೂರು ಐಎಂಎ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಮತ್ತು ಬಿಜೆಪಿ ಜಿಲ್ಲಾ ಆರೋಗ್ಯ ಪ್ರಕೋಷ್ಟದ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಮೂಲತಃ ಸುಳ್ಯ ತಾಲೂಕು, ಅಮರಮುಡ್ನೂರು ಗ್ರಾಮ ದೊಡ್ಡತೋಟದ ಸಂಕಬಿತ್ತಿಲಿನವರು. ಇವರ ಪತ್ನಿ ಡಾ.ಉಷಾ ಜಿ.ಕೆ.ಭಟ್ ನಗರದ ಜನಪ್ರಿಯ ಪ್ರಸೂತಿ ತಜ್ಞರು.





