‘ಸೀ ಫುಡ್ ಪಾರ್ಕ್’ ಪ್ರದೇಶಕ್ಕೆ ಡಿವೈಎಫ್‌ಐ, ರೈತ ಸಂಘ ಭೇಟಿ

ಮಂಗಳೂರು, ಜು.4: ಸ್ಥಳೀಯ ರೈತರು, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಪ್ರಸ್ತಾವಿತ ಸೀ ಫುಡ್ ಪಾರ್ಕ್ ಯೋಜನೆಯ ನಿಡ್ಡೋಡಿ ಗ್ರಾಮಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ, ಡಿವೈಎಫ್‌ಐ ಮುಖಂಡರಾದ ಮುನೀರ್ ಕಾಟಿಪಳ್ಳ, ಯಾದವ ಶೆಟ್ಟಿ, ಶ್ರೀನಾಥ್ ಕುಲಾಲ್ ನೇತೃತ್ವದ ನಿಯೋಗ ಭೇಟಿ ನೀಡಿ, ಗ್ರಾಮಸ್ಥರ ಜೊತೆಗೆ ಚರ್ಚೆ ನಡೆಸಿತು.
ರಾಜ್ಯ ಸರಕಾರವು ನಿಡ್ಡೋಡಿ ಗ್ರಾಮದ ಫಲವತ್ತಾದ 50 ಎಕರೆ ಕೃಷಿ ಭೂಮಿಯಲ್ಲಿ ಸೀ ಫುಡ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ. ಯೋಜನೆಯ ಕುರಿತು ಗ್ರಾಮಸ್ಥರಿಗೆ ಹಾಗೂ ಕೃಷಿ ಭೂಮಿಯ ಒಡೆತನ ಹೊಂದಿರುವ ರೈತರಿಗೆ ಯಾವುದೇ ಮಾಹಿತಿ ಒದಗಿಸದೆ ಅವರನ್ನು ಕತ್ತಲಲ್ಲಿ ಇಟ್ಟಿರುವುದು, ಘಟಕಕ್ಕೆ ದಿನವೊಂದಕ್ಕೆ ಬೇಕಾಗುವ ಕನಿಷ್ಠ ಐದು ಲಕ್ಷ ಲೀಟರ್ ನೀರು ಗ್ರಾಮದ ಅಂತರ್ಜಲದಿಂದ ಪಡೆಯುವ, ಮೀನು ಶುದ್ಧೀಕರಣ ಘಟಕದ ತ್ಯಾಜ್ಯ ನೀರು ವಿಲೇವಾರಿಯ ಕುರಿತು ಅಸ್ಪಷ್ಟತೆ, ಮೀನು ಸಂಸ್ಕರಣೆ, ಸಾಗಾಟದ ಸಂದರ್ಭ ಉಂಟಾಗುವ ಮಾಲಿನ್ಯ, ಸಮೃದ್ಧ ಕೃಷಿ ಪ್ರಧಾನ ನಿಡ್ಡೋಡಿ ಗ್ರಾಮದ ಪರಿಸರವು ಜನಜೀವನಕ್ಕೆ ಸೀ ಪುಡ್ ಪಾರ್ಕ್ ಕಂಟಕ ಎಂಬ ವಾದವನ್ನು ನಿಯೋಗ ಆಲಿಸಿತು.
ಘಟಕವನ್ನು ನಿಡ್ಡೋಡಿ ಗ್ರಾಮದಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಬೇಕು ಎನ್ನುವ ಹೋರಾಟವನ್ನು ಬೆಂಬಲಿಸುವುದಾಗಿ ನಿಯೋಗವು ಗ್ರಾಮಸ್ಥರಿಗೆ ಭರವಸೆ ನೀಡಿತು.












