ಡಿ.ಕೆ.ಶಿವಕುಮಾರ್ ಒಬ್ಬ ಸಂಘಟನಾ ಚತುರ, ಅವರ ಸೌಜನ್ಯವನ್ನು ಮೆಚ್ಚಬೇಕು: ಎಚ್. ವಿಶ್ವನಾಥ್

ಮೈಸೂರು,ಜು.4: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಬ್ಬ ಸಂಘಟನಾ ಚತುರ. ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ಪಕ್ಷವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಕರಗತಮಾಡಿಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಒಬ್ಬ ಸಂಘಟನಾ ಚತುರ ಪಕ್ಷನ್ನು ಹೇಗೆ ಮುನ್ನಡೆಸಬೇಕು ಯಾವ ರೀತಿ ಸಂಘಟನೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದಾರೆ. ಹಾಗಾಗಿಯೇ ಅವರು ಕಾಂಗ್ರೆಸ್ ತೊರೆದ 17 ಮಂದಿಯನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಹಾಗಂತ ಯಾರೂ ಹೋಗುವುದಿಲ್ಲ, ಆದರೂ ಅವರ ಸೌಜನ್ಯವನ್ನು ಮೆಚ್ಚುತ್ತೇನೆ. ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ಪಕ್ಷ ಸಂಘಟನೆಗೆ ಬೇಕಾದಂತಹ ಎಲ್ಲಾ ಮಾರ್ಗಗಳನ್ನು ಅವರು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ತೊರೆದ 17 ಮಂದಿಯನ್ನು ಪ್ರಳಯ ಆದರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಕರೆದ ತಕ್ಷಣ ಯಾರೂ ಹೋಗುವುದಿಲ್ಲ, ಸಿದ್ದರಾಮಯ್ಯ ಅವರಿಗೆ ನಾವು ಬಂದುಬಿಡುತ್ತೇವೆ ಅನ್ನೋ ಆತಂಕನೂ ಬೇಡ, ರಾಜಕೀಯದಲ್ಲಿ ಇಂತಹ ಹೇಳಿಕೆಗಳು ನಡೆಯದು. ರಾಜಕೀಯ ಪಕ್ಷಗಳ ನಡವಳಿಕೆ ಆಯಾ ಕಾಲ ಘಟ್ಟಕ್ಕೆ ಬದಲಾಗುತ್ತವೆ. ಒಬ್ಬ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಯಾದವರಿಗೆ ಸೌಜನ್ಯ ಎಂಬುದು ಇರಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್, ನಾನು. ಪರಮೇಶ್ವರ್, ಎಸ್.ಎಂ.ಕೃಷ್ಣ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡೆವು. ಸಿದ್ದರಾಮಯ್ಯ ಹಿರಿಯ ರಾಜಕಾರಣಿ ಅವರು ಮೊದಲು ಧ್ವೇಷ ಸಾಧನೆಯನ್ನು ಬಿಡಬೇಕು ಎಂದು ವಿಶ್ವನಾಥ್ ಹೇಳಿದರು.







